ಶಾರ್ಜಾದಿಂದ ತವರಿಗೆ ಮರಳಿದ ಅಲ್ವಿನ್ ಪ್ರಕಾಶ್ ಮೃತದೇಹ; ಕುಟುಂಬಸ್ಥರಿಂದ ಅಂತಿಮ ದರ್ಶನ
Friday, September 25, 2026
ಶಾರ್ಜಾದಲ್ಲಿ ಅಮಾನುಷ ರೀತಿಯಲ್ಲಿ ಕೊಲೆಗೀಡಾಗಿದ್ದ ಕುಂದಾಪುರ ಮೂಲದ ಅಲ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹ ತವರಿಗೆ ತಲುಪಿದೆ. ಸುಮಾರು ಎರಡು ತಿಂಗಳ ಹಿಂದೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಇದೀಗ ಮೃತದೇಹವನ್ನು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕುಂದಾಪುರಕ್ಕೆ ರವಾನಿಸಲಾಗಿದೆ.
ಮೃತದೇಹವನ್ನು ಇಂದು ಕುಂದಾಪುರಕ್ಕೆ ತಂದು ಅಂತಿಮ ವಿಧಿ ವಿಧಾನ ನೆರವೇರಿಸಲಾಗುತ್ತಿದೆ. ಕುಂದಾಪುರದ ನಿವಾಸಕ್ಕೆ ರಾಜಕೀಯ ಮುಖಂಡರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಶಾರ್ಜಾದಲ್ಲಿ ಅಲ್ವಿನ್ ಪ್ರಕಾಶ್ ಕುಂದರ್ ಅವರ ಮೃತದೇಹವು ಒಂಬತ್ತು ತುಂಡುಗಳಾಗಿ ಅವರದೇ ಕಾರಿನ ಡಿಕ್ಕಿಯಲ್ಲಿ ಪತ್ತೆಯಾಗಿತ್ತು. ಪ್ರಕರಣದ ಕುರಿತು ಶಾರ್ಜಾ ಪೊಲೀಸರು ತನಿಖೆ ನಡೆಸುತ್ತಿದ್ದು, ಕೊಲೆಯ ಹಿಂದಿರುವವರನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಘಟನೆ ನಡೆದ ಬಳಿಕ ಅಲ್ವಿನ್ ಅವರ ಪತ್ನಿ ಟೀನಾ ಕುಂದರ್ ಹಾಗೂ ಪುತ್ರ ನಾಪತ್ತೆಯಾಗಿರುವುದು ಕುಟುಂಬಸ್ಥರಲ್ಲಿ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಇಬ್ಬರ ನಾಪತ್ತೆಯ ಬಗ್ಗೆಯೂ ತನಿಖೆ ನಡೆಸಿ, ಪ್ರಕರಣದ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿರುವ ಚರ್ಚ್ ಆವರಣದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
