ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆಗೆ ತ್ರಿಸದಸ್ಯ ಸಮಿತಿ ರಚನೆ ಸ್ವಾಗತಾರ್ಹ: ಪ್ರೇಮ್ ಪ್ರಸಾದ್ ಶೆಟ್ಟಿ
ಕರಾವಳಿ ಭಾಗದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಸಂಚಾರಿ ಅಥವಾ ಶಾಶ್ವತ ಪೀಠ ಸ್ಥಾಪನೆ ಸಾಧ್ಯತೆ ಕುರಿತು ಅಧ್ಯಯನ ನಡೆಸಲು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದಲ್ಲಿ ತ್ರಿಸದಸ್ಯ ನ್ಯಾಯಮೂರ್ತಿಗಳ ಸಮಿತಿ ರಚಿಸಿರುವುದನ್ನು ಕರಾವಳಿ ಕರ್ನಾಟಕ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕ ಹಾಗೂ ಯು-ಆಕ್ಟ್ ಸಂಸ್ಥಾಪಕ, ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ ಸ್ವಾಗತಿಸಿದ್ದಾರೆ.
ನ್ಯಾಯಮೂರ್ತಿಗಳಾದ ಅನು ಶಿವರಾಮನ್, ಎಸ್.ಜಿ. ಪಂಡಿತ್ ಹಾಗೂ ಮೊಹಮ್ಮದ್ ನವಾಜ್ ಅವರನ್ನು ಒಳಗೊಂಡ ಸಮಿತಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಹಾಗೂ ದಾವಣಗೆರೆ ಜಿಲ್ಲೆಗಳ ವಕೀಲರ ಸಂಘಗಳು ಮತ್ತು ಸಂಬಂಧಿತ ಪಾಲುದಾರರನ್ನು ಸಂಪರ್ಕಿಸಿ ಸಮಗ್ರ ವರದಿ ಸಿದ್ಧಪಡಿಸಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರೇಮ್ ಪ್ರಸಾದ್ ಶೆಟ್ಟಿ, ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ನ್ಯಾಯವನ್ನು ಇನ್ನಷ್ಟು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಸಮಿತಿ ರಚನೆ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಅಪೀಲು ಮತ್ತು ಮೇಲ್ಮನವಿ ಪ್ರಕರಣಗಳಿಗಾಗಿ ದೂರದ ಬೆಂಗಳೂರಿಗೆ ತೆರಳಬೇಕಾಗಿರುವುದರಿಂದ ಸಾರ್ವಜನಿಕರು, ರೈತರು, ವ್ಯಾಪಾರಿಗಳು ಹಾಗೂ ಕಕ್ಷಿದಾರರು ಆರ್ಥಿಕ ಮತ್ತು ದೈಹಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವು ಪ್ರದೇಶಗಳಿಂದ 400ರಿಂದ 500 ಕಿ.ಮೀ.ಗೂ ಅಧಿಕ ದೂರ ಪ್ರಯಾಣಿಸಬೇಕಾಗಿರುವ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ನ್ಯಾಯ ವಿಕೇಂದ್ರೀಕರಣದ ಬೇಡಿಕೆಗೆ ಹೈಕೋರ್ಟ್ ಕೈಗೊಂಡಿರುವ ಕ್ರಮ ಹೊಸ ಭರವಸೆ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಕರಾವಳಿ ಭಾಗದ ಜನರ ಬೇಡಿಕೆಯನ್ನು ಹೈಕೋರ್ಟ್‌ಗೆ ತಲುಪಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಕರಾವಳಿ ಭಾಗದ ಜನಪ್ರತಿನಿಧಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ಉಡುಪಿ, ಮಂಗಳೂರು ಸೇರಿದಂತೆ ವಿವಿಧ ವಕೀಲರ ಸಂಘಗಳು, ನಾಗರಿಕ ಸಂಸ್ಥೆಗಳು ಹಾಗೂ ಯು-ಆಕ್ಟ್ ಸಂಘಟನೆಯ ಸಹಯೋಗದಲ್ಲಿ ಸಮಿತಿಗೆ ಅಗತ್ಯ ಮಾಹಿತಿ ಒದಗಿಸಲಾಗುವುದು. ಪ್ರಕರಣಗಳ ವಿವರ, ಬೆಂಗಳೂರಿಗೆ ತೆರಳಲು ಸಾರ್ವಜನಿಕರು ಭರಿಸುವ ಪ್ರಯಾಣ ವೆಚ್ಚ, ಕಕ್ಷಿದಾರರ ಮೇಲಿನ ಹೊರೆ ಹಾಗೂ ಪೀಠ ಸ್ಥಾಪನೆಗೆ ಅಗತ್ಯ ಮೂಲಸೌಕರ್ಯಗಳ ಕುರಿತ ಸಮಗ್ರ ಮಾಹಿತಿಯನ್ನು ಒಳಗೊಂಡ ವರದಿ ಸಲ್ಲಿಸಿ ಸಹಕಾರ ನೀಡಲಾಗುವುದು ಎಂದು ಪ್ರೇಮ್ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.