-->
ತುಳು ಭಾಷಾ ಮಾನ್ಯತೆ ಸಂಭ್ರಮ: ಉಡುಪಿಯಲ್ಲಿ ಅದ್ದೂರಿ ‘ತುಳುವೆರೆ ದಿಬ್ಬಣ’

ತುಳು ಭಾಷಾ ಮಾನ್ಯತೆ ಸಂಭ್ರಮ: ಉಡುಪಿಯಲ್ಲಿ ಅದ್ದೂರಿ ‘ತುಳುವೆರೆ ದಿಬ್ಬಣ’


ತುಳು ಭಾಷೆಗೆ ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ತುಳುಕೂಟ ಉಡುಪಿ ವತಿಯಿಂದ ಭಾನುವಾರ ನಗರದಲ್ಲಿ ‘ವಿಶೇಷ ತುಳುವೆರೆ ದಿಬ್ಬಣ’ ಹಾಗೂ ‘ಗೌಜಿ-ಮಿನದನ’ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.


ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ತುಳುವೆರೆ ದಿಬ್ಬಣಕ್ಕೆ ಕುಂಜಿಬೆಟ್ಟು ರಿಕ್ಷಾ ನಿಲ್ದಾಣದಿಂದ ಚಾಲನೆ ನೀಡಲಾಯಿತು. ತುಳುಕೂಟದ ಸದಸ್ಯರು ಹಾಗೂ ವಿವಿಧ ತುಳು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದ ಮೆರವಣಿಗೆಯಲ್ಲಿ ಅತಿಥಿಗಳನ್ನು ಅಲಂಕೃತ ವಾಹನದಲ್ಲಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣಕ್ಕೆ ಕರೆತರಲಾಯಿತು.


ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಸೇರಿದಂತೆ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.


ಬಳಿಕ ಐವೈಸಿ ಸಭಾಂಗಣದಲ್ಲಿ ‘ತುಳು ಭಾಷಾ ಮಾನ್ಯತೆ ಸಂಭ್ರಮ’, ‘ತುಳು ಮಿನದನ’ ಹಾಗೂ ವಿಶ್ವಪ್ರಭಾ ಪ್ರಾಯೋಜಿತ ಎಸ್.ಯು. ಪಣಿಯಾಡಿ ನೆನಪಿನ ತುಳು ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ, ತುಳು ಸಂಘಟನೆಗಳು ಒಗ್ಗೂಡಿ ನಿರಂತರವಾಗಿ ತುಳು ಭಾಷಾ ಕಾರ್ಯಕ್ರಮಗಳನ್ನು ನಡೆಸುವುದರಿಂದ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಹೋರಾಟಕ್ಕೆ ಮತ್ತಷ್ಟು ಬಲ ದೊರೆಯಲಿದೆ ಎಂದರು.


ತುಳು ಭಾಷೆಗೆ ಎಂಟನೇ ಪರಿಚ್ಛೇದದ ಮಾನ್ಯತೆ ದೊರೆತರೆ ಹಲವು ಪ್ರಯೋಜನಗಳು ಲಭಿಸಲಿದ್ದು, ತುಳು ಭಾಷಿಕರಿಗೆ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಡಲು ಅವಕಾಶ ಸಿಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮುಂದೆ ಒಗ್ಗಟ್ಟಿನಿಂದ ಬೇಡಿಕೆಗಳನ್ನು ಮಂಡಿಸಿದರೆ ಅವು ಈಡೇರುವ ವಿಶ್ವಾಸವಿದೆ ಎಂದು ಹೇಳಿದರು.

ತುಳು ಚಳವಳಿಯ ನೇತಾರ ದಿ. ಎಸ್.ಯು. ಪಣಿಯಾಡಿ ಅವರ ಸ್ಮರಣಾರ್ಥ ನೀಡಲಾಗುವ 31ನೇ ವರ್ಷದ ಕಾದಂಬರಿ ಪ್ರಶಸ್ತಿಯನ್ನು ಪುತ್ತೂರಿನ ಉಪತಹಶೀಲ್ದಾರ್ ಸುಲೋಚನಾ ಪಿ.ಕೆ. ಅವರ ‘ದಧೂಟಿಬನ’ ಕಾದಂಬರಿಗೆ ಪ್ರದಾನಿಸಲಾಯಿತು. ಕೃತಿಯನ್ನು ಪಲ್ಲಕಿಯಲ್ಲಿ ತಂದು ವಿಶಿಷ್ಟವಾಗಿ ಬಿಡುಗಡೆ ಮಾಡಲಾಯಿತು.

ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಿಸುವ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಮಂಗಳೂರು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತುಳು ವಿಷಯದಲ್ಲಿ ಶೇ.100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಇದೇ ವೇಳೆ ಗೌರವಿಸಲಾಯಿತು.

ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆಯ ಬೆಳವಣಿಗೆಗೆ ತುಳು ಸಮ್ಮೇಳನ ಆಯೋಜಿಸುವ ಅಗತ್ಯವಿದೆ. ಅಧಿಕೃತ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ತುಳು ಭಾಷೆಯನ್ನು ತುಳು ಲಿಪಿಯಲ್ಲೇ ಕಲಿಸುವ ವ್ಯವಸ್ಥೆ ಮಾಡಬೇಕು. ತುಳು ಕಲಿಕೆಯನ್ನು ಕಡ್ಡಾಯಗೊಳಿಸುವ ಮೂಲಕ ಭಾಷೆಗೆ ಇನ್ನಷ್ಟು ಮಾನ್ಯತೆ ದೊರಕಿಸಬೇಕು ಎಂದು ಹೇಳಿದರು.

ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ ಬರೋಡಾ ಶಶಿಧರ ಶೆಟ್ಟಿ ಮಾತನಾಡಿ, ತುಳು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆಯಾಗಿರುವುದರಿಂದ ಭಾಷೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆಯಿದೆ. ಮುಂದಿನ ಗುರಿಯಾಗಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಪ್ರಯತ್ನಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳು ಭಾಷೆಯಲ್ಲೇ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಅಡಗಿದೆ. ಉದ್ಯೋಗ ಹಾಗೂ ಉದ್ಯಮದ ನಿಮಿತ್ತ ಪರವೂರಿಗೆ ತೆರಳಿದರೂ ಮನೆಗಳಲ್ಲಿ ತುಳುವನ್ನು ಮಾತನಾಡುವ ಮೂಲಕ ಮುಂದಿನ ಪೀಳಿಗೆಗೆ ಭಾಷೆಯನ್ನು ಪರಿಚಯಿಸಬೇಕು. ನಮ್ಮ ದೈವ-ದೇವರು, ಆಚರಣೆ ಮತ್ತು ಸಂಪ್ರದಾಯಗಳ ಬಗ್ಗೆಯೂ ಮಕ್ಕಳಿಗೆ ತಿಳಿಸಬೇಕು ಎಂದು ಕರೆ ನೀಡಿದರು.

ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ ಬರೋಡಾ ಶಶಿಧರ ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್, ತುಳು ಸಂಘ ಬರೋಡಾದ ಗೌರವಾಧ್ಯಕ್ಷ ದಯಾನಂದ ಬೋಂಟ್ರ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಯುವ ಉದ್ಯಮಿ ಸುಭಾಷ್ ಸಾಲ್ಯಾನ್ ನೆಲ್ಲಿಕಟ್ಟಿ, ಸಾಂಗ್ಲಿ ದಿವಾಕರ್, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಬಹ್ರೈನ್ ರಾಜಕುಮಾರ್, ತುಳುಕೂಟದ ಉಪಾಧ್ಯಕ್ಷರಾದ ಭುವನ ಪ್ರಸಾದ್ ಹೆಗ್ಡೆ, ಡಾ. ವಿ.ಕೆ. ಯಾದವ್, ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ತುಳುವೆರೆ ದಿಬ್ಬಣ ಸಂಚಾಲಕ ದಿವಾಕರ್ ಸನಿಲ್, ಹೃದಯಂ ಫೌಂಡೇಶನ್‌ನ ಪ್ರವರ್ತಕ ಸುಭಾಷ್ ಸಾಲ್ಯಾನ್ ನೆಲ್ಲಿಕಟ್ಟೆ, ಶೋಭಾ ಮೊದಲಾದವರು ಉಪಸ್ಥಿತರಿದ್ದರು.

ವಾಸಂತಿ ಅಂಬಲಪಾಡಿ ಕೃತಿ ಪರಿಚಯ ಮಾಡಿದರು. ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕ ಪ್ರಕಾಶ್ ಸುವರ್ಣ ಕಟಪಾಡಿ ವಂದಿಸಿದರು. ನಿವೃತ್ತ ಉಪನ್ಯಾಸಕ ದಯಾನಂದ ಡಿ. ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article