ಮಲ್ಪೆಯಲ್ಲಿ ಗುಜರಿ ಹೆಕ್ಕುವ ವ್ಯಕ್ತಿಯ ಕೊಲೆ ಪ್ರಕರಣ: ಹುಬ್ಬಳ್ಳಿ ಮೂಲದ ಆರೋಪಿ ಬಂಧನ
Sunday, October 04, 2026
ಮಲ್ಪೆ ಬಾಬುತೋಟ ಧಕ್ಕೆಯ ಬಳಿ ಗುಜರಿ ಹೆಕ್ಕುವ ಕಾರ್ಮಿಕನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಮೂಲದ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹುಬ್ಬಳ್ಳಿ ಮೂಲದ ಆರೋಗ್ಯ ದಾಸ್ ಅಲಿಯಾಸ್ ಕಾಮಿ (55) ಎಂದು ಗುರುತಿಸಲಾಗಿದೆ. ಕಳೆದ ಸುಮಾರು ಮೂರು ವರ್ಷಗಳಿಂದ ಮಲ್ಪೆ ಬಂದರು ಪ್ರದೇಶದಲ್ಲಿ ಗುಜರಿ ವಸ್ತುಗಳನ್ನು ಸಂಗ್ರಹಿಸಿಕೊಂಡು ಜೀವನ ನಡೆಸುತ್ತಿದ್ದ ಪರಮೇಶಿಯನ್ನು ಸೆ.28ರಂದು ಕತ್ತು ಸೀಳಿ ಕೊಲೆ ಮಾಡಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಹುಬ್ಬಳ್ಳಿ ಹೊರವಲಯದಲ್ಲಿ ಬಂಧಿಸಿದ್ದಾರೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಹಾಗೂ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಮಲ್ಪೆ ಠಾಣೆ ಪೊಲೀಸ್ ಉಪನಿರೀಕ್ಷಕ ಅನೀಲ್ ಕುಮಾರ್ ಡಿ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.