ಜೇನು ಕಂಠದ ಗಾಯಕಿಗೆ ‘ಜಾನಕಿ ನಮನ’
ಉಡುಪಿಯ ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಆಶ್ರಯ, ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಪ್ರಾಯೋಜಕತ್ವದಲ್ಲಿ ಪ್ರಸಿದ್ಧ ಸಂಗೀತ ಕಲಾವಿದರ ಕೂಡುವಿಕೆಯಲ್ಲಿ ಇತ್ತೀಚೆಗೆ ನಿಧನ ಹೊಂದಿದ ದೇಶದ ಅಗ್ರ ಸಿನೆಮಾ ಗಾಯಕಿ ಎಸ್. ಜಾನಕಿ ಅವರ ಗಾನ ಸ್ಮರಣೆಯ ‘ಜಾನಕಿ ನಮನ’ ಕಾರ್ಯಕ್ರಮ ನಡೆಯಿತು.
ಉಡುಪಿ- ಕುಂಜಿಬೆಟ್ಟಿನ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಹೆಸರಾಂತ ಗಾಯಕಿ ಮತ್ತು ಗಾಯಕರು ಹಾಗೂ ಹಿನ್ನೆಲೆ ಸಂಗೀತ ಕಲಾವಿದರು ಸತತ ಮೂರು ಗಂಟೆಗಳ ಕಾಲ ಎಸ್. ಜಾನಕಿಯವರು ಹಾಡಿದ ಚಿರಸ್ಥಾಯಿಯಾಗಿರುವ ಹಲವಾರು ಹಾಡುಗಳನ್ನು ಹಾಡಿ ನೆರೆದ ನೂರಾರು ಸಂಗೀತ ರಸಿಕರ ಕಿವಿ-ಮನಗಳನ್ನು ತಣಿಸಿದರು.
ಇತ್ತೀಚೆಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಹೆಸರಾಂತ ಸಂಗೀತ ಕಲಾವಿದೆ ಸಂಗೀತಾ ಬಾಲಚಂದ್ರ, ಸರಿಗಮಪ ಜ್ಯೂರಿ ಖ್ಯಾತಿಯ ಮಾಲಿನಿ ಕೇಶವಪ್ರಸಾದ್, ಗಣೇಶ್ ಕಾರಂತ್,ಗೌರವ್ ಕಾಮತ್, ರಿಷಿಕಾ ಮೂಡ್ಲಕಟ್ಟೆ ಹಾಗೂ ರಮ್ಯಾ ಸುಧೀಂದ್ರ, ಸ್ವಾತಿ ಅರವಿಂದ್, ಶ್ರುತಿ ವೈದ್ಯ ಪ್ರಧಾನ ಆಕರ್ಷಣೆಯಾಗಿದ್ದು, ಎಸ್. ಜಾನಕಿಯವರ ಕಂಠದಿಂದ ಹೊಮ್ಮಿದ ಹತ್ತು ಹಲವು ಹಾಡುಗಳಿಗೆ ಧ್ವನಿಯಾದರು. ಹಿನ್ನೆಲೆಯಲ್ಲಿ ನಾಡಿನ ಪ್ರಸಿದ್ಧ ಸಂಗೀತ ಕಲಾವಿದರಾದ ರಾಜೇಶ್ ಭಾಗವತ್, ರಾಜಗೋಪಾಲ್, ಗುರುರಾಜ್, ಪ್ರತಾಪ್ ಆಚಾರ್ಯ, ವರ್ಷಾ ಆಚಾರ್ಯ ಗಾನ ಸುಧೆಯನ್ನು ಹೊಮ್ಮಿಸಿದರು. ಕಾರ್ಯಕ್ರಮದ ಆರಂಭದಲ್ಲಿ ನಡೆದ ಕಿರು ಸಭಾ ಕಾರ್ಯಕ್ರಮದಲ್ಲಿ ಕರ್ಣಾಟಕ ಬ್ಯಾಂಕ್ ಆರ್‌ಜಿಎಂ ರಮೇಶ್ ವೈದ್ಯ ಮತ್ತು ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರವಿಂದ ಕಾಮತ್ ಅವರು ಎಲ್ಲ ಸಂಗೀತ ಕಲಾವಿದರ ಜತೆಗೂಡಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೋಸ್ಟಲ್ ಸ್ಟಾರ್ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್ ಕಾಮತ್, ಸಹ ಸಂಸ್ಥಾಪಕರಾದ ವೆಂಕಟೇಶ್ ಕಾಮತ್, ವಂದಿತಾ ಕಾಮತ್ ಸಹಕರಿಸಿದರು.