ಹೋಂ ಸ್ಟೇಗೆ ಎನ್ಒಸಿ ನೀಡಲು ಲಂಚ: ಕುಂದಾಪುರ ತಾಲೂಕು ಕಚೇರಿ ವಿಎ ಲೋಕಾಯುಕ್ತ ಬಲೆಗೆ
ಹೋಂ ಸ್ಟೇ ನಿರ್ಮಾಣಕ್ಕೆ ನಿರಪೇಕ್ಷಣಾ ಪತ್ರ (ಎನ್ಒಸಿ) ನೀಡಲು 5 ಸಾವಿರ ರೂ. ಲಂಚ ಸ್ವೀಕರಿಸಿದ ಆರೋಪದ ಮೇಲೆ ಕುಂದಾಪುರ ತಾಲೂಕು ಕಚೇರಿಯ ಗ್ರಾಮ ಆಡಳಿತಾಧಿಕಾರಿ ಹರೀಶ್ ಎಸ್. ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಕಚೇರಿಯಲ್ಲೇ ಬಂಧಿಸಿದ್ದಾರೆ.
ಕಂಡ್ಲೂರಿನಲ್ಲಿ ನಿರ್ಮಾಣವಾಗಲಿರುವ ಹೋಂ ಸ್ಟೇಗೆ ಎನ್ಒಸಿ ನೀಡಲು ವಿಎ ಹರೀಶ್ ಅವರು 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಸುರೇಶ್ ಎಂಬವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಆರೋಪಿಯು ಲಂಚದ ಹಣವನ್ನು ಗೂಗಲ್ ಪೇ ಮೂಲಕ ಕಳುಹಿಸುವಂತೆ ಸೂಚಿಸಿದ್ದ ಎನ್ನಲಾಗಿದ್ದು, ಅದರಂತೆ ದೂರುದಾರರು ಹಣ ವರ್ಗಾಯಿಸಿದ್ದರು. ಹಣ ಕಳುಹಿಸುವಂತೆ ಸೂಚಿಸಿದ ದೂರವಾಣಿ ಕರೆಯ ಧ್ವನಿಮುದ್ರಣ ಸೇರಿದಂತೆ ಲಭ್ಯ ದಾಖಲೆಗಳನ್ನು ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು, ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಉಡುಪಿ ಡಿವೈಎಸ್ಪಿ ಹಾಲಮೂರ್ತಿ ರಾವ್ ಅವರ ನಿರ್ದೇಶನದಂತೆ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಾಜೇಂದ್ರ ನಾಯ್ಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಸಿಬ್ಬಂದಿಗಳಾದ ರಾಘವೇಂದ್ರ, ನಾಗರಾಜ್, ಅರುಣ್, ಅಬ್ದುಲ್ ಜಲಾಲ್, ರವೀಂದ್ರ, ಆದರ್ಶ, ರಾಘವೇಂದ್ರ ಹೊಸ್ಕೋಟೆ ಹಾಗೂ ಸೂರಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.