-->
ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ವಯೋಜನ, ಯುವಜನ ಆಯೋಗ ಸ್ಥಾಪನೆಗೆ ಸಲಹೆ: ಶಾಹಿದ್ ತೆಕ್ಕಿಲ್

ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ವಯೋಜನ, ಯುವಜನ ಆಯೋಗ ಸ್ಥಾಪನೆಗೆ ಸಲಹೆ: ಶಾಹಿದ್ ತೆಕ್ಕಿಲ್


ರಾಜ್ಯದ ಯುವಕರು ಮತ್ತು ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ 'ವಯೋಜನ ಆಯೋಗ' ಮತ್ತು 'ಯುವಜನ ಆಯೋಗ'ಗಳನ್ನು ಸ್ಥಾಪಿಸಬೇಕೆಂದು ಸಲಹೆ ನೀಡಿರುವುದಾಗಿ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಶಾಹಿದ್ ತೆಕ್ಕಿಲ್ ಹೇಳಿದರು.

ಮಣಿಪಾಲ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ಸಮರ್ಪಕವಾಗಿ ದೊರೆಯಬೇಕು. ಅವರ ಹಕ್ಕುಗಳ ರಕ್ಷಣೆ, ಆರೋಗ್ಯ ತಪಾಸಣೆ ಹಾಗೂ ಕಲ್ಯಾಣ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ದಿನಬಳಕೆಯ ವಸ್ತುಗಳು, ಅಡುಗೆ ಅನಿಲ, ಆಹಾರ ಉತ್ಪನ್ನಗಳು ಹಾಗೂ ಬೇಳೆಕಾಳುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಅವರ ದುಡಿಮೆಗೆ ತಕ್ಕ ಪ್ರತಿಫಲ ದೊರೆಯಬೇಕು. ಈ ನಿಟ್ಟಿನಲ್ಲಿ ಕನಿಷ್ಠ ವೇತನ ಪರಿಷ್ಕರಣೆ ಅಗತ್ಯವಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ಕನಿಷ್ಠ ವೇತನದಲ್ಲಿ ಗಮನಾರ್ಹ ಏರಿಕೆಯಾಗಿರಲಿಲ್ಲ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಕನಿಷ್ಠ ವೇತನ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಕನಿಷ್ಠ 19 ಸಾವಿರ ರೂ. ಹಾಗೂ ನಗರ ಪ್ರದೇಶದ ಕಾರ್ಮಿಕರಿಗೆ 21 ಸಾವಿರ ರೂ. ವೇತನ ನಿಗದಿಪಡಿಸುವ ಅಗತ್ಯವಿದೆ. ಈ ಸಂಬಂಧ ಕೈಗೊಂಡಿರುವ ಕ್ರಮಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಬಂದಿದ್ದು, ಶೀಘ್ರದಲ್ಲೇ ತಡೆಯಾಜ್ಞೆ ತೆರವಾಗಿ ತೀರ್ಪು ಹೊರಬರುವ ನಿರೀಕ್ಷೆಯಿದೆ. ಕಾರ್ಮಿಕರ ಹಕ್ಕು ಮತ್ತು ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಸುಮಾರು ಮೂರೂವರೆ ಕೋಟಿ ಕಾರ್ಮಿಕರಿದ್ದು, ಅವರಿಗೆ ನ್ಯಾಯ ದೊರೆಯುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಕಾರ್ಮಿಕ ಸಂಘಟನೆಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಂದಿನ ಸಭೆಯಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸಲಾಗುವುದು. ಸರ್ಕಾರ ಕಾರ್ಮಿಕರ ಪರವಾಗಿದ್ದು, ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಪತ್ರಕರ್ತರಿಗೂ ಕನಿಷ್ಠ ವೇತನ ದೊರೆಯುವ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಶಿಫಾರಸು ಸಲ್ಲಿಸುವ ಉದ್ದೇಶವಿದೆ ಎಂದು ಹೇಳಿದರು.

ರಾಜ್ಯದ 224 ತಾಲೂಕುಗಳು ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದರೂ ಕೇಂದ್ರ ಸರ್ಕಾರ ಈವರೆಗೆ ಸೂಕ್ತವಾಗಿ ಸ್ಪಂದಿಸಿಲ್ಲ. ರಾಜ್ಯದ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ರಾಜ್ಯದ ಬಿಜೆಪಿ ನಾಯಕರು ಮಾಡುತ್ತಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣವೂ ಸಮರ್ಪಕವಾಗಿ ಬಂದಿಲ್ಲ. ಹೊಸ ಯೋಜನೆಗಳು ಹಾಗೂ ಅನುದಾನಗಳ ಮೂಲಕ ರಾಜ್ಯಕ್ಕೆ ನೆರವು ದೊರೆಯುತ್ತಿಲ್ಲ. ದೇಶದ ಸಾರ್ವಜನಿಕ ಸಂಪತ್ತು ಖಾಸಗಿಯವರ ಪಾಲಾಗುತ್ತಿದೆ  ಎಂದು ಶಾಹಿದ್ ತೆಕ್ಕಿಲ್ ಅಸಮಾಧಾನ ವ್ಯಕ್ತಪಡಿಸಿದರು.


Ads on article

Advertise in articles 1

advertising articles 2

Advertise under the article