ನಮ್ಮ ಆಸೆ- ಆಮಿಷಗಳೂ ಕೂಡಾ ಒತ್ತಡದ ಬದುಕಿಗೆ ಕಾರಣ: ಹರಿಪ್ರಸಾದ್ ರೈ
ಇಂದಿನ ದಿನಗಳಲ್ಲಿ ಪ್ಲೇ ಸ್ಕೂಲ್‌ಗೆ ಹೋಗುವ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧಾಪ್ಯದಲ್ಲಿರುವವರವರೆಗೆ ಎಲ್ಲರೂ ಒಂದಲ್ಲೊಂದು ರೀತಿಯ ಒತ್ತಡವನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮೇಲೆ ಅಂಕಗಳು, ಪರೀಕ್ಷೆಗಳು ಸೇರಿದಂತೆ ಹಲವು ರೀತಿಯ ಒತ್ತಡಗಳು ಹೆಚ್ಚುತ್ತಿವೆ. ದೊಡ್ಡವರೂ ವಿವಿಧ ಸಮಸ್ಯೆಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಒತ್ತಡವನ್ನು ಕಡಿಮೆ ಮಾಡಲು ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ನಿತ್ಯ ಧ್ಯಾನ, ಯೋಗ ಹಾಗೂ ವ್ಯಾಯಾಮದ ಮೂಲಕ ದೇಹ ಮತ್ತು ಮನಸ್ಸನ್ನು ಒತ್ತಡದಿಂದ ದೂರವಿರಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಲಯನ್ಸ್ ಜಿಲ್ಲಾ 317Cರ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಹೇಳಿದರು.
ಅವರು ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ, ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಲಯನ್ಸ್ ಕ್ಲಬ್ ಮಣಿಪಾಲ, ಲಯನ್ಸ್ ಕ್ಲಬ್ ಆಫ್ ಉಡುಪಿ ಲಕ್ಷ್ಯ, ಲಯನ್ಸ್ ಜಿಲ್ಲಾ 317C ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ-ಕರಾವಳಿ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಕಮಲ್ ಎ. ಬಾಳಿಗ ಸಭಾಂಗಣದಲ್ಲಿ ನಡೆದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆಲವು ವರ್ಷಗಳ ಹಿಂದಿನ ತನಕ ನಮ್ಮ ಹಿರಿಯರು ಭೂತ ಕೋಲ ಅಂತ ತಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಮಾಡುತ್ತಾ ನೆಮ್ಮದಿಯಿಂದ ಇದ್ದರು. ಆದರೆ ಇತ್ತೀಚೆಗೆ ಮಾನಸಿಕ ಒತ್ತಡಗಳು ಹೆಚ್ಚುತ್ತಿವೆ. ಕೆಲವೊಂದು ಆಸೆ , ಆಮಿಷಗಳು ಕೂಡಾ ನಮ್ಮನ್ನು ಒತ್ತಡದ ಬದುಕಿಗೆ ತಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಮಾತನಾಡಿದರು.
ಬಳಿಕ ಬಂಧು ಹಗಲು ಆರೈಕೆ ಕೇಂದ್ರ, ಅಭಯ ಪುನರ್ವಸತಿ ಕೇಂದ್ರ, ಹೊಂಬೆಳಕು ಮತ್ತು ಪರಿವರ್ತನ ಸಂಸ್ಥೆಗಳ ನಿವಾಸಿಗಳಿಗಾಗಿ ಒಳಾಂಗಣ ಹಾಗೂ ಹೊರಾಂಗಣ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ನಿವಾಸಿಗಳಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ಫಲಾನುಭವಿಗಳು ಹಾಗೂ ಅವರ ಕುಟುಂಬದವರನ್ನೂ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ 317Cರ ದ್ವಿತೀಯ ಉಪ ಜಿಲ್ಲಾ ಗವರ್ನರ್ ರಮಾನಂದ ಕೆ., ಲಯನ್ಸ್ ಗ್ಲೋಬಲ್ ಕಾಸಸ್ ಮಾನಸಿಕ ಆರೋಗ್ಯದ ಮುಖ್ಯ ಸಂಯೋಜಕ ರವಿರಾಜ ನಾಯಕ್, ಲಯನ್ಸ್ ಕ್ಲಬ್ ಮಣಿಪಾಲದ ಅಧ್ಯಕ್ಷ ಕೃಷ್ಣ ಮುಖೋಪಾಧ್ಯಾಯ, ಲಯನ್ಸ್ ಕ್ಲಬ್ ಆಫ್ ಉಡುಪಿ ಲಕ್ಷ್ಯದ ಅಧ್ಯಕ್ಷ ಲಯನ್ ಹೆರಾಲ್ಡ್ ಸೋನ್ಸ್, ಕಾರ್ಯಕ್ರಮ ಸಂಯೋಜಕ ಡಾ. ಎಚ್. ಗಣೇಶ್ ಪೈ, IMA ಉಡುಪಿ-ಕರಾವಳಿಯ ಅಧ್ಯಕ್ಷ ಡಾ. ಕೃಷ್ಣಮೂರ್ತಿ ಉಪಾಧ್ಯಾಯ, ಲಯನ್ ಜೋನ್ ಚೇರ್ಮನ್ ಡಾ. ನಿಶಾಂತ್ ಪಿ. ಭಟ್ ಹಾಗೂ ಆಸ್ಪತ್ರೆಯ ಮನೋವೈದ್ಯ ಡಾ. ಮಾನಸ್ ಈ.ಆರ್. ಉಪಸ್ಥಿತರಿದ್ದರು.
ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಬಂಧು ಹಗಲು ಆರೈಕೆ ಕೇಂದ್ರದ ನಿವಾಸಿ ಶಶಿರೇಖಾ ಪ್ರಾರ್ಥಿಸಿದರು. ಆಪ್ತ ಸಮಾಲೋಚಕಿ ಜಮೀಲಾ ರಹೀಮ್ ವಂದಿಸಿದರು. ಆಪ್ತ ಸಮಾಲೋಚಕಿ ಪದ್ಮಾ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಬಂಧು ಹಗಲು ಆರೈಕೆ ಕೇಂದ್ರ, ಅಭಯ ಪುನರ್ವಸತಿ ಕೇಂದ್ರ, ಹೊಂಬೆಳಕು ಮತ್ತು ಪರಿವರ್ತನ ಸಂಸ್ಥೆಗಳ ನಿವಾಸಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.