ಸಿಜೆಪಿ ಪ್ರತಿಭಟನೆಗೆ ತೆರಳುತ್ತಿದ್ದ ಮಮತಾ ಬ್ಯಾನರ್ಜಿ ವಶಕ್ಕೆ ಪಡೆದ ಪೊಲೀಸರು
Saturday, October 10, 2026
ನವದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಶನಿವಾರ ಮಧ್ಯ ದಿಲ್ಲಿಯ ಸೌತ್ ಅವೆನ್ಯೂ ಪ್ರದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ಪ್ರತಿಭಟನೆಗೆ ತೆರಳದಂತೆ ತಡೆದ ಹಿನ್ನೆಲೆಯಲ್ಲಿ ಸೌತ್ ಅವೆನ್ಯೂ ಪ್ರದೇಶದ ಬಸ್ ನಿಲ್ದಾಣದಲ್ಲಿ ಕುಳಿತು ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮಮತಾ ಬ್ಯಾನರ್ಜಿ ಸೇರಿದಂತೆ ಡೆರೆಕ್ ಒಬ್ರಿಯಾನ್, ದೋಲಾ ಸೇನ್ ಮತ್ತಿತರ ಐವರು ಟಿಎಂಸಿ ಸಂಸದರನ್ನು ಪೊಲೀಸರು ವಶಕ್ಕೆ ಪಡೆದು ಪೊಲೀಸ್ ಬಸ್‌ನಲ್ಲಿ ಕರೆದೊಯ್ದಿದ್ದಾರೆ.
ಪ್ರತಿಭಟನೆ ವೇಳೆ ಮಮತಾ ಬ್ಯಾನರ್ಜಿ ಅವರು ಬಾಯಿಗೆ ಬ್ಯಾಂಡೇಜ್ ಅಂಟಿಸಿಕೊಂಡು ಮೌನ ಪ್ರತಿಭಟನೆ ನಡೆಸಿದ್ದು ಗಮನ ಸೆಳೆಯಿತು. ಬಳಿಕ ಪೊಲೀಸ್ ಬಸ್‌ನೊಳಗಿನಿಂದ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ ಅವರು, “ಸರಕಾರ ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದೆ. ಜನರ ಧ್ವನಿಯನ್ನು ಬಲಪಡಿಸಲು ಇಂಡಿಯಾ ಮೈತ್ರಿಕೂಟದ ಹೋರಾಟ ಮುಂದುವರಿಯಲಿದೆ” ಎಂದು ತಿಳಿಸಿದ್ದಾರೆ.