MRPL ಸ್ಫೋಟಕ್ಕೆ ಮತ್ತೊಂದು ಬಲಿ: ರಾಜೇಶ್ ಡಿ ಸಿಲ್ವ ಕುಟುಂಬಕ್ಕೆ 1.20 ಕೋಟಿ ಪರಿಹಾರಕ್ಕೆ ಮುನೀರ್ ಆಗ್ರಹ
Saturday, October 17, 2026
ಮಂಗಳೂರಿನ MRPL ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುರತ್ಕಲ್ನ ಗುತ್ತಿಗೆ ಕಾರ್ಮಿಕ ರಾಜೇಶ್ ಡಿ ಸಿಲ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಸಂತಾಪ ವ್ಯಕ್ತಪಡಿಸಿದ್ದಾರೆ .
MRPL ಆಡಳಿತದ ಹೊಣೆಗೇಡಿತನ ಹಾಗೂ ಸುರಕ್ಷತಾ ವೈಫಲ್ಯದಿಂದ ಯುವಕ ರಾಜೇಶ್ ಡಿ ಸಿಲ್ವ ಬಲಿಯಾಗಿದ್ದಾರೆ ಎಂದು ಆರೋಪಿಸಿರುವ ಅವರು, ಈ ಹಿಂದೆ ಮೃತಪಟ್ಟ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ನೀಡಿದಂತೆ ರಾಜೇಶ್ ಕುಟುಂಬಕ್ಕೂ 1.20 ಕೋಟಿ ಪರಿಹಾರ ಧನವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸ್ಫೋಟಕ್ಕೆ ಕಾರಣವಾದ ಅಂಶಗಳ ಪ್ರಾಥಮಿಕ ತನಿಖಾ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ನಾಗರಿಕ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯ ಮೂಲಕ ಸ್ಫೋಟದ ಕುರಿತು ಸಮಗ್ರ ತನಿಖೆ ನಡೆಸಬೇಕು. ಮೃತಪಟ್ಟ ರಾಜೇಶ್ ಡಿ ಸಿಲ್ವ ಹಾಗೂ ಮನೀಶ್ ಕರ್ಕಡ ಅವರ ಕುಟುಂಬದ ಸದಸ್ಯರಿಗೆ MRPLನಲ್ಲಿ ನೇರ ಉದ್ಯೋಗ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಹಾನಿಗೊಳಗಾದ ಸುತ್ತಮುತ್ತಲಿನ ಗ್ರಾಮಸ್ಥರ ಆಸ್ತಿಪಾಸ್ತಿಗಳಿಗೆ ನ್ಯಾಯಯುತ ಪರಿಹಾರವನ್ನು ಶೀಘ್ರವಾಗಿ ವಿತರಿಸಬೇಕು ಎಂದು ಆಗ್ರಹಿಸಿರುವ ಮುನೀರ್ ಕಾಟಿಪಳ್ಳ, ಮಂಗಳೂರಿನ ಧಾರಣಾ ಸಾಮರ್ಥ್ಯ ಹಾಗೂ MRPL ಸುತ್ತಮುತ್ತಲಿನ ದಟ್ಟ ಜನವಸತಿಯನ್ನು ಪರಿಗಣಿಸಿ, ಸಂಸ್ಥೆಯ ನಾಲ್ಕನೇ ಹಂತದ ವಿಸ್ತರಣಾ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.