-->
ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ


ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಆಡಳಿತ ವೈಫಲ್ಯವನ್ನು ಖಂಡಿಸಿ ಕಾರ್ಕಳ ಬಿಜೆಪಿ ಮಂಡಲದ ವತಿಯಿಂದ ಸೋಮವಾರ ಕಾರ್ಕಳ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

 


ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜಿಲ್ಲಾ ಬಿಜೆಪಿ ಮುಖಂಡರು ಭಾಗವಹಿಸಿದ್ದರು. 


ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸುನಿಲ್ ಕುಮಾರ್, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗುತ್ತಾ ಬಂದರೂ ಸಾಮಾನ್ಯ ಜನರ ಸಂಕಷ್ಟಗಳಿಗೆ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿದರು. ನಾಲ್ಕು ಬಜೆಟ್‌ಗಳ ಬಳಿಕವೂ ಜನರಿಗೆ ನೀಡಿದ ಭರವಸೆಗಳ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ ಎಂದರು.

ಹೊಸ ಬಿಪಿಎಲ್‌ ರೇಷನ್‌ ಕಾರ್ಡ್‌ಗಳನ್ನು ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು, ಮತ್ತೊಂದೆಡೆ ಈಗಾಗಲೇ ಇರುವ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಅವರು ಆರೋಪಿಸಿದರು. ವೃದ್ಧರು ಸೇರಿದಂತೆ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿದ್ದ ಸಾವಿರಾರು ಮಂದಿಗೆ ಕಳೆದ ಹಲವು ತಿಂಗಳಿಂದ ಪಿಂಚಣಿ ಸಿಗುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ 47,477 ಮಂದಿಯ ಪಿಂಚಣಿ ಸ್ಥಗಿತಗೊಂಡಿದೆ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆಯಲ್ಲೂ ಪರಿಷ್ಕರಣೆಯ ಹೆಸರಿನಲ್ಲಿ ಫಲಾನುಭವಿಗಳನ್ನು ಕೈಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯಕ್ಕೆ ಎಷ್ಟು ವಸತಿ ಯೋಜನೆಗಳು ಬಂದಿವೆ ಎಂಬುದನ್ನು ಕಾಂಗ್ರೆಸ್ ನಾಯಕರು ಜನರಿಗೆ ತಿಳಿಸಬೇಕು ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಲು, ಮಣ್ಣು ಹಾಗೂ ಮರಳಿನ ಲಭ್ಯತೆಯಲ್ಲಿ ಸಮಸ್ಯೆ ಇರಲಿಲ್ಲ. ಆದರೆ ಇದೀಗ ಕಟ್ಟಡ ನಿರ್ಮಾಣ ಸಾಮಗ್ರಿಗಳ ದರ ದುಪ್ಪಟ್ಟಾಗಿದ್ದು, ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಯೋಜನೆಗಳಿಗೆ ಸರ್ವರ್ ಸಮಸ್ಯೆ ಇಲ್ಲದಿದ್ದರೂ ರಾಜ್ಯ ಸರ್ಕಾರದ ಯೋಜನೆಗಳಿಗೆ ಮಾತ್ರ ಪದೇಪದೇ ಸರ್ವರ್ ಸಮಸ್ಯೆ ಎದುರಾಗುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ವಿದ್ಯುತ್‌ ಕಡಿತದ ವಿಚಾರದಲ್ಲೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದಂತೆ ವಿದ್ಯುತ್‌ ಪೂರೈಕೆಯಲ್ಲಿ ಸ್ಥಿರತೆ ಇಲ್ಲ. ಈಗ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಅಘೋಷಿತ ವಿದ್ಯುತ್‌ ಕಡಿತ ಸಾಮಾನ್ಯವಾಗಿದೆ ಎಂದು ಆರೋಪಿಸಿದರು. 94ಸಿ ಹಾಗೂ ಬಗರ್‌ಹುಕುಂ ಅರ್ಜಿಗಳ ತಿರಸ್ಕಾರದಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. 63 ಸಾವಿರ ಬಗರ್‌ಹುಕುಂ ಅರ್ಜಿಗಳನ್ನು ತಿರಸ್ಕರಿಸಿದರೆ ಸಂತ್ರಸ್ತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಈ ಸಮಸ್ಯೆಗಳನ್ನು ಬಿಜೆಪಿ ಪ್ರತಿಭಟನೆಯ ಪ್ರಮುಖ ವಿಚಾರಗಳಾಗಿ ಮುಂದಿಟ್ಟಿದೆ. 

ಜನರ ಗಮನವನ್ನು ಬೇರೆಡೆ ಸೆಳೆಯಲು ಎಸ್‌ಐಆರ್‌ ಹಾಗೂ ವಂದೇ ಮಾತರಂ ವಿಚಾರಗಳನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಸುನಿಲ್ ಕುಮಾರ್ ಆರೋಪಿಸಿದರು. ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದು, ಭರವಸೆಗಳನ್ನಷ್ಟೇ ನೀಡದೆ ಅವುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಜನಸಾಮಾನ್ಯರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದ ಸುನಿಲ್ ಕುಮಾರ್, ಅಕ್ಟೋಬರ್ 26ರಂದು ಉಡುಪಿಯಲ್ಲಿ ಹಗಲು-ರಾತ್ರಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಸರ್ಕಾರವನ್ನು ಬೀಳಿಸುವ ಆಲೋಚನೆ ಬಿಜೆಪಿಗೆ ಇಲ್ಲ. ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ ಎಂದು ಅವರು ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು, ಜನಪ್ರತಿನಿಧಿಗಳು ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Ads on article

Advertise in articles 1

advertising articles 2

Advertise under the article