-->
 ಸುರತ್ಕಲ್: ಪೊಲೀಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮೀನುಗಾರ ಸೋಮನಾಥ್ ಮನೆಗೆ ಶಾಸಕ ಯಶ್ಪಾಲ್ ಭೇಟಿ

ಸುರತ್ಕಲ್: ಪೊಲೀಸ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮೀನುಗಾರ ಸೋಮನಾಥ್ ಮನೆಗೆ ಶಾಸಕ ಯಶ್ಪಾಲ್ ಭೇಟಿ


ಸುರತ್ಕಲ್‌ನ ಹೊಸಬೆಟ್ಟಿನಲ್ಲಿ ಪೊಲೀಸ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಮೀನುಗಾರ ಸೋಮನಾಥ ಅವರ ಮನೆಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರೊಂದಿಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ, ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು.


ಈ ಸಂದರ್ಭದಲ್ಲಿ ಮಾತನಾಡಿದ ಯಶ್‌ಪಾಲ್ ಸುವರ್ಣ, ಅಕ್ಟೋಬರ್ 25ರಂದು ಬೀಚ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯುವ ಜೋಡಿಯನ್ನು ಸೋಮನಾಥ ಅವರು ಪ್ರಶ್ನಿಸಿದ್ದರು. ಈ ಸಂಬಂಧ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸರು ವಿಚಾರಣೆ ನಡೆಸಿದ್ದರು. ಪೊಲೀಸ್ ವಿಚಾರಣೆಯ ನೆಪದಲ್ಲಿ ನೀಡಿದ ಕಿರುಕುಳದಿಂದ ಮನನೊಂದು ಸೋಮನಾಥ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ಘಟನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು. ದೂರು ನೀಡಿದ ಯುವ ಜೋಡಿಯನ್ನೂ ವಿಚಾರಣೆಗೊಳಪಡಿಸಿ, ತಪ್ಪು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ವಿಚಾರಣೆಯ ನೆಪದಲ್ಲಿ ಸೋಮನಾಥ ಅವರಿಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎನ್ನಲಾದ ಪೊಲೀಸ್ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಿ, ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಮೃತ ಸೋಮನಾಥ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ, ಅವರ ಪತ್ನಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಮುದ್ರ ತೀರದಲ್ಲಿ ಪ್ರವಾಸಿಗರಿಗೆ ತುರ್ತು ಸಂದರ್ಭದಲ್ಲಿ ನೆರವಾಗಲು ಜೀವದ ಹಂಗು ತೊರೆದು ಧಾವಿಸುವ ಮೀನುಗಾರರು, ಪೊಲೀಸ್ ಇಲಾಖೆಯೊಂದಿಗೆ ಸದಾ ಸಹಕಾರದಿಂದ ಕಾರ್ಯನಿರ್ವಹಿಸುತ್ತಾರೆ. ಇಂತಹ ಮೀನುಗಾರರೇ ಪೊಲೀಸ್ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಮೀನುಗಾರರ ಮಾನಸಿಕ ಸ್ಥೈರ್ಯ ಕುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇಂತಹ ಪ್ರಕರಣಗಳಲ್ಲಿ ಪೊಲೀಸರು ವ್ಯಕ್ತಿಯ ಹಿನ್ನೆಲೆ ಹಾಗೂ ಘಟನೆಯ ಪೂರ್ವಾಪರಗಳನ್ನು ಪರಿಶೀಲಿಸಬೇಕು. ದೂರು ನೀಡಿದವರು ಮತ್ತು ಆರೋಪಿತರು ಸೇರಿದಂತೆ ಘಟನೆಯ ಎರಡೂ ಕಡೆಯವರನ್ನು ವಿಚಾರಣೆಗೊಳಪಡಿಸಿ, ವಾಸ್ತವಾಂಶಗಳನ್ನು ತಿಳಿದುಕೊಂಡು ಕ್ರಮ ಕೈಗೊಳ್ಳಬೇಕು. ಪ್ರವಾಸಿಗರ ದೂರನ್ನು ಮಾತ್ರ ಏಕಪಕ್ಷೀಯವಾಗಿ ಪರಿಗಣಿಸಿ, ಸ್ಥಳೀಯರ ಅಭಿಪ್ರಾಯವನ್ನು ಆಲಿಸದೆ ವಿಚಾರಣೆಯ ನೆಪದಲ್ಲಿ ಕಿರುಕುಳ ನೀಡುವುದರಿಂದ ಇಂತಹ ಅಹಿತಕರ ಘಟನೆಗಳಿಗೆ ಅವಕಾಶವಾಗುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಬೇಕು ಎಂದು ಯಶ್‌ಪಾಲ್ ಸುವರ್ಣ ಆಗ್ರಹಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಮೀನುಗಾರ ಪ್ರಕೋಷ್ಠದ ಗಿರೀಶ್ ತಣ್ಣೀರುಬಾವಿ, ಉಡುಪಿ ಜಿಲ್ಲಾ ಬಿಜೆಪಿ ಮೀನುಗಾರ ಪ್ರಕೋಷ್ಠದ ಶರತ್ ಕೋಟ್ಯಾನ್ ಬೈಲಕರೆ, ಮಾಜಿ ಕಾರ್ಪೊರೇಟರ್ ನಯನ, ರಾಜೇಶ್ ಬೈಕಂಪಾಡಿ, ಸ್ಥಳೀಯ ಮುಖಂಡ ಸುಧೀರ್ ಶ್ರೀಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article