ಕರಾವಳಿ ರೈತರ ಕಣ್ಣೀಗ ತಾಳೆ ಕೃಷಿಯತ್ತ: ಕೃಷಿಮೇಳದಲ್ಲಿ ತಾಳೆಕೃಷಿ ಪರಿಚಯ
Saturday, October 17, 2026
ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಹೀಗೆ ಹಲವು ಬೆಳೆಗಳನ್ನು ಮಿಶ್ರ ಪದ್ಧತಿಯಲ್ಲಿ ಬೆಳೆಯುವ ಕರಾವಳಿಯ ರೈತರಿಗೆ ತಾಳೆ ಕೃಷಿಯೂ ಭವಿಷ್ಯದ ಆದಾಯದ ಹೊಸ ಆಯ್ಕೆಯಾಗಬಹುದು. ಪರ್ಯಾಯ ಕೃಷಿಯತ್ತ ರೈತರ ಗಮನ ಸೆಳೆಯುವ ಉದ್ದೇಶದಿಂದ ಬ್ರಹ್ಮಾವರದ ಕೃಷಿ ಮೇಳದಲ್ಲಿ ತಾಳೆ ಕೃಷಿಯ ವೈಶಿಷ್ಟ್ಯ, ಬೆಳವಣಿಗೆಯ ಹಂತಗಳು ಹಾಗೂ ಕೃಷಿ ವಿಧಾನಗಳನ್ನು ಪರಿಚಯಿಸಲಾಯಿತು. ಗಂಡು ಮತ್ತು ಹೆಣ್ಣು ತಾಳೆ ಹೂವುಗಳು, ಹಣ್ಣುಗಳು ಹಾಗೂ ತಾಳೆ ಎಣ್ಣೆಯ ವಿವಿಧ ಉತ್ಪನ್ನಗಳ ಪ್ರದರ್ಶನವು ಕೃಷಿ ಆಸಕ್ತರ ಗಮನ ಸೆಳೆಯಿತು.
ತಾಳೆ ಗಿಡದ ಫಲಧಾರಣೆಯ ಪ್ರಕ್ರಿಯೆ ವಿಶಿಷ್ಟವಾಗಿದೆ. ಗಂಡು ಮತ್ತು ಹೆಣ್ಣು ಹೂವುಗಳ ನಡುವಿನ ವ್ಯತ್ಯಾಸವನ್ನು ಪ್ರದರ್ಶನದ ಮೂಲಕ ವಿವರಿಸಲಾಯಿತು. ಹೆಣ್ಣು ಹೂವುಗಳು ಪರಾಗಸ್ಪರ್ಶದ ಬಳಿಕ ಕಾಯಿಗಳಾಗಿ ಬೆಳೆಯುತ್ತವೆ. Elaeidobius kamerunicus ಎಂಬ ಜೀರುಂಡೆಯು ಪರಾಗಸ್ಪರ್ಶಕ್ಕೆ ನೆರವಾಗಿ ಕಾಯಿ ಕಟ್ಟುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಾಳೆ ಹಣ್ಣಿನ ಒಳಗಿನ ಗಟ್ಟಿಯಾದ ಬೀಜದಿಂದ ಪಡೆಯುವ ಪಾಮ್ ಕರ್ನಲ್ ಆಯಿಲ್, ಕಚ್ಚಾ ಪಾಮ್ ಆಯಿಲ್ ಹಾಗೂ ಸಂಸ್ಕರಿಸಿದ ತಾಳೆ ಎಣ್ಣೆಯನ್ನೂ ಪ್ರದರ್ಶನಕ್ಕಿಡಲಾಗಿತ್ತು.
ಉಷ್ಣವಲಯದ ಬೆಳೆಯಾಗಿರುವ ತಾಳೆಗೆ ತೇವಾಂಶವಿರುವ ವಾತಾವರಣ ಅನುಕೂಲಕರ. 22ರಿಂದ 33 ಡಿಗ್ರಿ ಸೆಲ್ಸಿಯಸ್ ತಾಪಮಾನ, ಸಾಕಷ್ಟು ಸೂರ್ಯನ ಬೆಳಕು ಹಾಗೂ ಫಲವತ್ತಾದ, ನೀರು ಸರಾಗವಾಗಿ ಬಸಿದುಹೋಗುವ ಮಣ್ಣು ಉತ್ತಮ ಬೆಳವಣಿಗೆಗೆ ಸಹಕಾರಿ. ಕರಾವಳಿಯಲ್ಲಿ ಉತ್ತಮ ಮಳೆಯಾಗುವುದರಿಂದ ನೀರು ನಿಲ್ಲದಂತೆ ಸೂಕ್ತ ಬಸಿಗಾಲುವೆ ವ್ಯವಸ್ಥೆ ಕಲ್ಪಿಸುವುದು ಮುಖ್ಯವಾಗುತ್ತದೆ. ಮಣ್ಣಿನ ಗುಣಮಟ್ಟ ಮತ್ತು ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಕೃಷಿ ಕೈಗೊಳ್ಳುವುದು ಅಗತ್ಯ.
ತಾಳೆ ಗಿಡಗಳನ್ನು ತ್ರಿಕೋನ ಪದ್ಧತಿಯಲ್ಲಿ ಸುಮಾರು 9 ಮೀಟರ್ ಅಂತರದಲ್ಲಿ ನಾಟಿ ಮಾಡಿದರೆ ಒಂದು ಎಕರೆಗೆ ಅಂದಾಜು 57 ಗಿಡಗಳನ್ನು ಬೆಳೆಸಬಹುದು. ಆರಂಭದ ಮೂರು ವರ್ಷಗಳಲ್ಲಿ ಗಿಡಗಳ ನಡುವಿನ ಖಾಲಿ ಜಾಗದಲ್ಲಿ ತರಕಾರಿ, ದ್ವಿದಳ ಧಾನ್ಯಗಳು ಸೇರಿದಂತೆ ಅಲ್ಪಾವಧಿ ಬೆಳೆಗಳನ್ನು ಬೆಳೆಯಬಹುದು. ಇದರಿಂದ ತಾಳೆ ಬೆಳೆಯಿಂದ ಆದಾಯ ಆರಂಭವಾಗುವ ಮುನ್ನವೇ ರೈತರಿಗೆ ಹೆಚ್ಚುವರಿ ಆದಾಯ ಗಳಿಸಲು ಅವಕಾಶ ದೊರೆಯುತ್ತದೆ.
ನಾಟಿ ಮಾಡಿದ 14ರಿಂದ 18 ತಿಂಗಳಲ್ಲೇ ಹೂಗೊಂಚಲುಗಳು ಕಾಣಿಸಿಕೊಳ್ಳಬಹುದಾದರೂ, ಆರಂಭಿಕ ವರ್ಷಗಳಲ್ಲಿ ಗಿಡದ ಕಾಂಡ ಮತ್ತು ಬೇರುಗಳು ಸದೃಢವಾಗಿ ಬೆಳೆಯಲು ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ಮೊದಲ ಎರಡು-ಮೂರು ವರ್ಷಗಳಲ್ಲಿ ಮೂಡುವ ಹೂಗೊಂಚಲುಗಳನ್ನು ತೆಗೆದುಹಾಕುವ ಪದ್ಧತಿಯನ್ನು ಅನುಸರಿಸಲಾಗುತ್ತದೆ.
ತಾಳೆ ಕೃಷಿಯಲ್ಲಿ ತಾಳ್ಮೆ ಮತ್ತು ನಿರಂತರ ನಿರ್ವಹಣೆ ಅತ್ಯಗತ್ಯ. ನಾಟಿ ಮಾಡಿದ ನಾಲ್ಕನೇ ವರ್ಷದಿಂದ ವಾಣಿಜ್ಯಿಕ ಇಳುವರಿ ಆರಂಭವಾಗುವ ನಿರೀಕ್ಷೆಯಿದ್ದು, ಹತ್ತನೇ ವರ್ಷದ ವೇಳೆಗೆ ಗಿಡಗಳು ಸ್ಥಿರವಾದ ಗರಿಷ್ಠ ಇಳುವರಿಯನ್ನು ತಲುಪಬಹುದು. ಹೀಗಾಗಿ ತಕ್ಷಣದ ಲಾಭಕ್ಕಿಂತ ದೀರ್ಘಾವಧಿಯ ಆದಾಯದತ್ತ ಗಮನ ಹರಿಸುವ ರೈತರಿಗೆ ತಾಳೆ ಕೃಷಿ ಪರ್ಯಾಯ ಆಯ್ಕೆಯಾಗುವ ಸಾಧ್ಯತೆಯಿದೆ.
ಮಿಶ್ರ ಕೃಷಿಯೇ ಕರಾವಳಿಯ ರೈತರ ಬಲವಾಗಿರುವ ಸಂದರ್ಭದಲ್ಲಿ, ಸೂಕ್ತ ತಾಂತ್ರಿಕ ಮಾರ್ಗದರ್ಶನ ಮತ್ತು ಸ್ಥಳೀಯ ಪರಿಸ್ಥಿತಿಗೆ ಹೊಂದುವ ಯೋಜನೆಯೊಂದಿಗೆ ತಾಳೆ ಕೃಷಿಯನ್ನು ಪರಿಚಯಿಸುವ ಪ್ರಯತ್ನವು ಕರಾವಳಿ ರೈತರಿಗೆ ಸಹಕಾರಿಯಾಗಲಿದೆ.

.jpeg)

.jpeg)