-->
ಉಡುಪಿಯಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಲಿ: ಬ್ರಹ್ಮಾವರದಲ್ಲಿ ಹಕ್ಕೊತ್ತಾಯ

ಉಡುಪಿಯಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಯಾಗಲಿ: ಬ್ರಹ್ಮಾವರದಲ್ಲಿ ಹಕ್ಕೊತ್ತಾಯ


ಕರಾವಳಿ ಭಾಗದ ಜನರಿಗೆ ತ್ವರಿತ ಹಾಗೂ ಸುಲಭವಾಗಿ ನ್ಯಾಯ ದೊರೆಯುವಂತಾಗಲು ಕರಾವಳಿ ಹೈಕೋರ್ಟ್ ಪೀಠವನ್ನು ಉಡುಪಿ ಜಿಲ್ಲೆಯಲ್ಲಿ ಶೀಘ್ರ ಸ್ಥಾಪಿಸಬೇಕು ಎಂದು ಬ್ರಹ್ಮಾವರ ತಾಲೂಕು ಹಕ್ಕೊತ್ತಾಯ ಸಭೆಯಲ್ಲಿ ಆಗ್ರಹಿಸಲಾಯಿತು.


ಕರಾವಳಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಉಡುಪಿ ಜಿಲ್ಲಾ ಘಟಕದ ಕರೆಯ ಮೇರೆಗೆ ಬ್ರಹ್ಮಾವರ ತಾಲೂಕು ಹೋರಾಟ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ, ಹೈಕೋರ್ಟ್ ಪೀಠ ಸ್ಥಾಪನೆಗೆ ಬೆಂಬಲ ವ್ಯಕ್ತಪಡಿಸಿದರು. ಕರಾವಳಿಯ ಮಧ್ಯಭಾಗದಲ್ಲಿರುವ ಉಡುಪಿಯಲ್ಲಿ ಪೀಠ ಸ್ಥಾಪನೆಯಾದರೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜನರ ಜತೆಗೆ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರಿಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ, ನ್ಯಾಯವಾದಿ ಪ್ರೇಮ್ ಪ್ರಸಾದ್ ಶೆಟ್ಟಿ, “ನಮ್ಮ ದಶಕಗಳ ಬೇಡಿಕೆ ಈಡೇರಿಸಲು ಇದು ಸಕಾಲ. ನ್ಯಾಯಾಂಗ ಸುಧಾರಣೆಗಳಿಗೆ ಸಂಬಂಧಿಸಿದ ನ್ಯಾಯಮೂರ್ತಿ ಜಸ್ವಂತ್ ಸಿಂಗ್ ಆಯೋಗ, ಕೇಂದ್ರ ಸರ್ಕಾರದ ನೀತಿ ಆಯೋಗ ಹಾಗೂ ರಾಷ್ಟ್ರೀಯ ಕಾನೂನು ಆಯೋಗದ ವರದಿಗಳು ನಮ್ಮ ಬೇಡಿಕೆಗೆ ಪೂರಕವಾಗಿವೆ. ನಮ್ಮ ಹೋರಾಟದ ಫಲವಾಗಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಕಳೆದ ತಿಂಗಳು ಪೀಠ ಸ್ಥಾಪನೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಲು ತ್ರಿಸದಸ್ಯ ನ್ಯಾಯಮೂರ್ತಿಗಳ ಸಮಿತಿಯನ್ನು ನೇಮಿಸಿರುವುದು ಸ್ವಾಗತಾರ್ಹ ಬೆಳವಣಿಗೆ” ಎಂದರು.

“ಪ್ರಸ್ತುತ ಕರಾವಳಿ ಭಾಗದ ಜನರು ಹೈಕೋರ್ಟ್‌ಗೆ ಸಂಬಂಧಿಸಿದ ಕೆಲಸಗಳಿಗಾಗಿ ಬೆಂಗಳೂರಿಗೆ ಸುಮಾರು ಸಾವಿರ ಕಿಲೋಮೀಟರ್ ಪ್ರಯಾಣಿಸಬೇಕಾದ ಪರಿಸ್ಥಿತಿಯಿದೆ. ಇದರಿಂದ ಸಮಯ, ಹಣ ಹಾಗೂ ಶ್ರಮ ವ್ಯರ್ಥವಾಗುತ್ತಿದ್ದು, ಸಾಮಾನ್ಯ ಜನರು ನ್ಯಾಯ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಸಂವಿಧಾನದ 14 ಮತ್ತು 21ನೇ ವಿಧಿಗಳು ಪ್ರತಿಪಾದಿಸುವ ಸಮಾನತೆ ಹಾಗೂ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕುಗಳ ಆಶಯಕ್ಕೆ ಅನುಗುಣವಾಗಿ ಎಲ್ಲರಿಗೂ ನ್ಯಾಯ ಸುಲಭವಾಗಿ ದೊರೆಯಬೇಕು. ಈ ನಿಟ್ಟಿನಲ್ಲಿ ಕರಾವಳಿ ಹೈಕೋರ್ಟ್ ಪೀಠ ಸ್ಥಾಪನೆ ಮಹತ್ವದ ಪರಿಹಾರವಾಗಬಲ್ಲದು” ಎಂದು ಹೇಳಿದರು.

ರಾಜ್ಯದ ಎರಡನೇ ಅತಿ ಹೆಚ್ಚು ತೆರಿಗೆ ಕೊಡುಗೆ ನೀಡುವ ಪ್ರದೇಶವೆಂದು ಗುರುತಿಸಲ್ಪಡುವ ಕರಾವಳಿಯ 50 ಲಕ್ಷಕ್ಕೂ ಅಧಿಕ ಜನರು ಬೆಂಗಳೂರಿನ ಮುಖ್ಯ ನ್ಯಾಯಪೀಠವನ್ನು ಅವಲಂಬಿಸುವುದನ್ನು ತಪ್ಪಿಸುವುದು ಹಾಗೂ ಜನಸಾಮಾನ್ಯರ ಮನೆಬಾಗಿಲಿಗೆ ನ್ಯಾಯದಾನ ವ್ಯವಸ್ಥೆಯನ್ನು ತಲುಪಿಸುವುದು ಹೋರಾಟದ ಪ್ರಮುಖ ಉದ್ದೇಶವಾಗಿದೆ. ಇದು ಬಡವರು, ಹಿಂದುಳಿದ ವರ್ಗಗಳು ಹಾಗೂ ಸಾಮಾನ್ಯ ಜನರ ನ್ಯಾಯಯುತ ಹೋರಾಟವಾಗಿದ್ದು, ಬೇಡಿಕೆ ಈಡೇರುವವರೆಗೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.


ಸಭೆಯನ್ನುದ್ದೇಶಿಸಿ ಉದ್ಯಮಿ ಹಾಗೂ ರಾಜಕೀಯ ಮುಖಂಡ ಪ್ರಸಾದ್ ರಾಜ್ ಕಾಂಚನ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಭುಜಂಗ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಶೇಖರ್ ಹಾವಂಜೆ ಹಾಗೂ ಜ್ಞಾನ ವಸಂತ್ ಶೆಟ್ಟಿ ಮಾತನಾಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಸುಧೇಶ್ ಹೆಗ್ಡೆ, ರೋಟರಿ ಕ್ಲಬ್‌ನ ಪ್ರಮೋದ್ ಶೆಟ್ಟಿ, ಜೈಕಿಶನ್, ಹಿರಿಯ ನಾಗರಿಕರ ವೇದಿಕೆಯ ಶೇಡಿಕೋಡ್ಲು ವಿಠ್ಠಲ್ ಶೆಟ್ಟಿ, ಸಮತಾ ಸೈನಿಕ ದಳದ ಮಹಿಳಾ ಅಧ್ಯಕ್ಷೆ ಜ್ಯೋತಿ ಶಿರಿಯಾರ, ಆರ್‌ಟಿಐ ಕಾರ್ಯಕರ್ತ ಸದಾಶಿವ ಶೆಟ್ಟಿ, ಬಾರಕೂರು ಶಾಂತರಾಮ್ ಶೆಟ್ಟಿ, ಅಖಿಲ್ ಹೆಗ್ಡೆ, ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರ ಅಲ್ತಾರ್, ಹರೀಶ್ ಶೆಟ್ಟಿ ಚೇರ್ಕಾಡಿ, ಪೌರ್ಣಮಿ ಪ್ರೇಮ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಆಟೋ ಚಾಲಕರ ಸಂಘ, ಗೂಡ್ಸ್ ಆಟೋ ಮಾಲಕರ ಸಂಘ, ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಪ್ರತಿನಿಧಿಗಳು ಹಾಗೂ ಎಸ್‌ಎಂಎಸ್ ಮತ್ತು ವಿಬಿಸಿಎಲ್ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ತಡೆಕಲ್ಲು ವಂದಿಸಿದರು.

Ads on article

Advertise in articles 1

advertising articles 2

Advertise under the article