ಕೇಪು ಕೋಳಿ ಅಂಕ ಪ್ರಕರಣ: ಶಾಸಕ ಅಶೋಕ್ ರೈ ಸೇರಿ 26 ಮಂದಿ ಖುಲಾಸೆ
Friday, November 06, 2026
ವಿಟ್ಲ ಸಮೀಪದ ಕೇಪು ಗ್ರಾಮದ ಶ್ರೀ ಉಳ್ಳಾಲ್ತಿ ದೇವಸ್ಥಾನದ ವಠಾರದಲ್ಲಿ ನಡೆದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಸಂಬಂಧಿಸಿದಂತೆ ಶಾಸಕ ಅಶೋಕ್ ರೈ ಸೇರಿದಂತೆ 26 ಮಂದಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ, ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ.
2025ರ ಡಿಸೆಂಬರ್ 20ರಂದು ಕೇಪು ಗ್ರಾಮದ ಶ್ರೀ ಉಳ್ಳಾಲ್ತಿ ದೇವಸ್ಥಾನದ ಅಂಗಳದಲ್ಲಿ ವರ್ಷಂಪ್ರತಿ ಹರಕೆಯ ರೂಪದಲ್ಲಿ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿದ್ದರು.
ಅನುಮತಿ ಇಲ್ಲದೆ ಕೋಳಿ ಅಂಕ ನಡೆಸಿದ ಆರೋಪದ ಮೇರೆಗೆ ಶಾಸಕ ಅಶೋಕ್ ರೈ ಸೇರಿದಂತೆ ಒಟ್ಟು 26 ಮಂದಿಯ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು ಆರೋಪಿಗಳ ಮೇಲಿನ ಪ್ರಕರಣವನ್ನು ರದ್ದುಗೊಳಿಸಿ, ಎಲ್ಲರನ್ನೂ ಖುಲಾಸೆಗೊಳಿಸಿ ಆದೇಶಿಸಿದೆ.