ಬಾಳೆಕುದ್ರು ಮಠದ ಮೂರ್ತಿಗಳ ವಿಚಾರದಲ್ಲಿ ಅಪಚಾರ ನಡೆದಿಲ್ಲ: ಅನಿಲ್ ಕುಮಾರ್ ಸ್ಪಷ್ಟನೆ (Video)
ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆಯ ಬಾಳೆಕುದ್ರು ಮಠದಲ್ಲಿದ್ದ ಕೆಲವು ಹಳೆಯ ಹಾಗೂ ಜೀರ್ಣಾವಸ್ಥೆಯಲ್ಲಿದ್ದ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿತ್ತು. ಸ್ವಾಮೀಜಿಯವರ ನಿರ್ದೇಶನದಂತೆ ಈ ಪ್ರಕ್ರಿಯೆ ನಡೆದಿದೆಯೇ ಹೊರತು, ಯಾವುದೇ ಕಳ್ಳತನ ಅಥವಾ ಅಕ್ರಮ ಮಾರಾಟದ ಉದ್ದೇಶ ಇರಲಿಲ್ಲ ಎಂದು ಮಠದ ಆಡಳಿತಾಧಿಕಾರಿ ಅನಿಲ್ ಕುಮಾರ್ ಮಧ್ಯಸ್ಥ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಮಠದ ಪೀಠಾಧಿಪತಿ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ, ಆಡಳಿತಾಧಿಕಾರಿ ಅನಿಲ್ ಕುಮಾರ್ ಮಧ್ಯಸ್ಥ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಸ್ವಾಮೀಜಿಗಳು ಕಾನೂನು ಪ್ರಕ್ರಿಯೆಗಾಗಿ ತೆರಳಿದ್ದಾರೆಯೇ ಹೊರತು ಮಠವನ್ನು ಬಿಟ್ಟು ಓಡಿಹೋಗಿದ್ದಾರೆ ಎಂದು ಬಿಂಬಿಸುವುದು ಸರಿಯಲ್ಲ. ಮಠದ ನಿತ್ಯ ಪೂಜಾ ಕೈಂಕರ್ಯಗಳಿಗೆ ಯಾವುದೇ ಚ್ಯುತಿ ಉಂಟಾಗದಂತೆ ಪುರೋಹಿತರನ್ನು ನೇಮಿಸಲಾಗಿದೆ. ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗಾಗಿ ನಾವೆಲ್ಲರೂ ಸ್ವಾಮೀಜಿಗಳ ಜೊತೆಯಲ್ಲಿದ್ದೇವೆ. ಯಾವುದೇ ರೀತಿಯ ಅಪಚಾರ ಎಸಗಿಲ್ಲ ಎಂದು ತಿಳಿಸಿದ್ದಾರೆ.
ಮಠದ ಎಲ್ಲಾ ವಿಗ್ರಹಗಳೂ ಸ್ವಾಮೀಜಿಯವರ ಬಳಿಯೇ ಸುರಕ್ಷಿತವಾಗಿವೆ. ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸತ್ಯಾಂಶಗಳನ್ನು ಬಹಿರಂಗಪಡಿಸಲಾಗುವುದು. ಅಲ್ಲಿಯವರೆಗೆ ಭಕ್ತರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಅನಿಲ್ ಕುಮಾರ್ ಮಧ್ಯಸ್ಥ ಮನವಿ ಮಾಡಿದ್ದಾರೆ.