-->
ಉಡುಪಿ ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಾರ್ಷಿಕೋತ್ಸವ: ವಿವಿಧ ದೇಶಗಳ ಸಾಂಸ್ಕೃತಿಕ ವೈವಿಧ್ಯತೆ ಅನಾವರಣ

ಉಡುಪಿ ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಾರ್ಷಿಕೋತ್ಸವ: ವಿವಿಧ ದೇಶಗಳ ಸಾಂಸ್ಕೃತಿಕ ವೈವಿಧ್ಯತೆ ಅನಾವರಣ


ಪಠ್ಯದ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ವಿವಿಧ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಉಡುಪಿಯ ಪೋದಾರ್ ಅಂತರಾಷ್ಟ್ರೀಯ ಶಾಲೆಯ 2026-27ನೇ ಸಾಲಿನ ವಾರ್ಷಿಕೋತ್ಸವವನ್ನು ನಗರದ ಟೌನ್‌ಹಾಲ್ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.


ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಮಕ್ಕಳ ತಜ್ಞ ಡಾ. ಅಶೋಕ್ ಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, “ಸೋಲು ಯಶಸ್ಸಿನ ಮೆಟ್ಟಿಲು. ಮಕ್ಕಳಿಗೆ ಸೋಲನ್ನು ಎದುರಿಸುವುದನ್ನು ಕಲಿಸಿಕೊಡುವ ಅಗತ್ಯವಿದೆ. ಶೇ.100ರಷ್ಟು ಫಲಿತಾಂಶ ಪಡೆದವರಿಗೂ ಎಲ್ಲವೂ ತಿಳಿದಿರುತ್ತದೆ ಎಂದಲ್ಲ. ಸೋಲು ಎಂದರೆ ಜೀವನ ಮುಗಿದಂತೆ ಅಲ್ಲ. ಜೀವನದಲ್ಲಿ ಸಾಧಿಸಲು ಇನ್ನೂ ಬಹಳಷ್ಟಿದೆ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು” ಎಂದರು.

ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಮಾತನಾಡಿ, ಕಳೆದ ವರ್ಷದ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶಾಲೆ ಎರಡನೇ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಚಾರ. ಪ್ರಾಂಶುಪಾಲೆ ನೇತ್ರಾ ಅವರ ನೇತೃತ್ವದಲ್ಲಿ ವಾರ್ಷಿಕೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿರುವುದು ಸಂತಸದ ಸಂಗತಿ. ಪೋದಾರ್ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಬೆರೆಯುವ ರೀತಿಯೂ ಶ್ಲಾಘನೀಯ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮೊಬೈಲ್‌ನಿಂದ ಮಕ್ಕಳನ್ನು ದೂರವಿಟ್ಟು, ಪ್ರೀತಿ ಮತ್ತು ಕಾಳಜಿಯಿಂದ ಜೀವನದ ಪಾಠ ಕಲಿಸಿದರೆ ಅವರು ಶ್ರೇಷ್ಠ ನಾಯಕರಾಗಿ ಬೆಳೆಯಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಇಂಡಿಯಾ ಟ್ಯಾಲೆಂಟ್ ಒಲಿಂಪಿಯಾಡ್‌ನಲ್ಲಿ ಟಾಪರ್ ಆಗಿರುವ ಪ್ರಹ್ಲಾದ್ ಪಿ. ನಾಯಕ್ ಹಾಗೂ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಸಾಧನೆ ಮಾಡಿದ ರಿಧಿ ಆರ್., ರಿಷಿಕಾ ರಾಜೇಶ್ ಮತ್ತು ಪ್ರೀಕ್ಷಿತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಶಾಲೆಯ ಪ್ರಾಂಶುಪಾಲೆ ನೇತ್ರಾ ಎಚ್. ಅಧ್ಯಕ್ಷತೆ ವಹಿಸಿ ಮಾತನಾಡಿ, 2017ರಲ್ಲಿ 100 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ ಇಂದು 595 ವಿದ್ಯಾರ್ಥಿಗಳಿದ್ದಾರೆ ಎನ್ನುವುದು ಹೆಮ್ಮೆಯ ವಿಚಾರ. ಇದು ಕೇವಲ ಶಾಲಾ ವಾರ್ಷಿಕೋತ್ಸವವಲ್ಲ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಾಗಿದ ಯಶಸ್ಸಿನ ಹಾದಿಯನ್ನು ಸಂಭ್ರಮಿಸುವ ಹಬ್ಬವಾಗಿದೆ ಎಂದರು.

ಶಿವಮೊಗ್ಗ ಪೋದಾರ್ ಅಂತರಾಷ್ಟ್ರೀಯ ಶಾಲೆಯ ಪ್ರಾಂಶುಪಾಲೆ ಡಾ. ಸರೋಜಿನಿ ಬಿ. ಶಿಲಿನ್ ಹಾಗೂ ಪೋದಾರ್ ಪ್ರೆಪ್ ಮುಖ್ಯ ಶಿಕ್ಷಕಿ ಗೀತಾ ಲವೀನ್ ಪೂಜಾರಿ ವೇದಿಕೆಯಲ್ಲಿದ್ದರು.

ಬಳಿಕ ಪೋದಾರ್ ಪ್ರೆಪ್ ಹಾಗೂ ಒಂದರಿಂದ ಮೂರನೇ ತರಗತಿಯ ವಿದ್ಯಾರ್ಥಿಗಳಿಂದ 'ವಸುದೈವ ಕುಟುಂಬಕಂ–ವಿಶ್ವವೇ ಒಂದು ಕುಟುಂಬ' ಎಂಬ ಆಶಯದಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಶ್ವದ ವಿವಿಧ ದೇಶಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ನೃತ್ಯ, ಸಂಗೀತ, ನಾಟಕ ಹಾಗೂ ವೇಷಭೂಷಣಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.


ಸಂಜೆ ನಡೆದ ಕಾರ್ಯಕ್ರಮದಲ್ಲಿ ಮಾಹೆಯ ಔಷಧಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಕೆ. ಶ್ರೀಧರ್ ರಂಗನಾಥ್ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ 'ವಿಕಸಿತ ಭಾರತ 2047'ರ ಸಂಕಲ್ಪದ ಕುರಿತು ವಿವರಿಸಿದರು. ಗೌರವ ಅತಿಥಿಯಾಗಿ ಭಾಗವಹಿಸಿದ್ದ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಅವರು ಮಕ್ಕಳ ಕಾಳಜಿ ಮತ್ತು ಆರೈಕೆಯ ಮಹತ್ವದ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ 2025-26ನೇ ಶೈಕ್ಷಣಿಕ ಸಾಲಿನ 10ನೇ ತರಗತಿಯ ಸಾಧಕ ವಿದ್ಯಾರ್ಥಿಗಳಾದ ಪ್ರಾರ್ಥನಾ ಪಿ. ರಾವ್, ಅದಿತಿ ಪೈ, ಅಮ್ನಿ ಹರಿಣಿ, ರಿತಿಕಾ ಪೈ, ವೇದಾಂತ್ ಶಾನ್ಭಾಗ್, ಆರ್ಯನ್ ಅಭಿಜಿತ್ ಸೂರ್ಯವಂಶಿ, ತಾಹಾ ತೌಸಿಫ್, ಅಂಶುಲ್ ಸುವರ್ಣ ಹಾಗೂ ಶೀತಲ್ ಅವರನ್ನು ಗೌರವಿಸಲಾಯಿತು.


ವಿದ್ಯಾರ್ಥಿಗಳಾದ ಆರವ್ ಹೆಗ್ಡೆ, ಪವಿತ್ರ ನಾಯಕ್, ಆದೀಶ್ ಹೆಗ್ಡೆ ಹಾಗೂ ಪ್ರಿಯಾಂಕ ರಾವ್ ಕಾರ್ಯಕ್ರಮ ನಿರೂಪಿಸಿದರು. ಹಲೀಮಾ ಸ್ವಾಗತಿಸಿ, ನಿವಾಂಶಿ ವಂದಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ನೇತ್ರಾ ಎಚ್., ಮುಖ್ಯ ಅತಿಥಿ ಡಾ. ಕೆ. ಶ್ರೀಧರ್ ರಂಗನಾಥ್ ಪೈ, ಗೌರವ ಅತಿಥಿ ಡಾ. ಮಮತಾ ಕೆ.ವಿ., ಪೋದಾರ್ ಪ್ರೆಪ್ ಮುಖ್ಯ ಶಿಕ್ಷಕಿ ಗೀತಾ ಲವೀನ್ ಪೂಜಾರಿ, ಶಾಲೆಯ ಆಡಳಿತಾಧಿಕಾರಿ ಹರೀಶ್ ನಾಯಕ್, ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಮತ್ತು ಪೋಷಕರು ಉಪಸ್ಥಿತರಿದ್ದರು. ಶ್ರೀಕೃಷ್ಣನ ದಿವ್ಯ ಜೀವನ ಹಾಗೂ ಮೋಹಕ ಪಯಣವನ್ನು ಬಿಂಬಿಸುವ ಕೃಷ್ಣಾಷ್ಟಮಿಯ ಭವ್ಯ ನೃತ್ಯರೂಪಕ ವಾರ್ಷಿಕೋತ್ಸವದ ವಿಶೇಷ ಆಕರ್ಷಣೆಯಾಗಿತ್ತು. ಶಿಕ್ಷಕರು ಮತ್ತು ಪೋಷಕರು ಕೂಡ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ವಿಶ್ವ ಭ್ರಾತೃತ್ವ, ಏಕತೆ ಮತ್ತು ಸಾಮರಸ್ಯದ ಸಂದೇಶ ಸಾರಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.


Ads on article

Advertise in articles 1

advertising articles 2

Advertise under the article