-->
 ಕಾಪುವಿನಲ್ಲಿ ಪದ್ಮಶಾಲಿ ಸಮಾಜದ ಸಂಸ್ಥಾಪಕರ ಸಂಸ್ಮರಣೆ: ‘ವಿದ್ಯಾಸೇತು’ ಆ್ಯಪ್ ಬಿಡುಗಡೆ

ಕಾಪುವಿನಲ್ಲಿ ಪದ್ಮಶಾಲಿ ಸಮಾಜದ ಸಂಸ್ಥಾಪಕರ ಸಂಸ್ಮರಣೆ: ‘ವಿದ್ಯಾಸೇತು’ ಆ್ಯಪ್ ಬಿಡುಗಡೆ


ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಸಂಸ್ಥಾಪಕರ ಸಂಸ್ಮರಣೆ ಕಾರ್ಯಕ್ರಮವು ಕಾಪು ವೀರಭದ್ರ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ವಿನೂತನ ಉಪಕ್ರಮವಾದ ‘ವಿದ್ಯಾಸೇತು’ ಆ್ಯಪ್ ಬಿಡುಗಡೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.

ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬೈಯ ಅಧ್ಯಕ್ಷ ಕೃಷ್ಣಾನಂದ ಎಂ. ಶೆಟ್ಟಿಗಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉಡುಪಿಯ ಕಟಪಾಡಿಯಲ್ಲಿ ಸಮಾಜ ಭವನ ನಿರ್ಮಿಸುತ್ತಿದ್ದು, ಅದರಿಂದ ಬರುವ ಆದಾಯವನ್ನು ಪದ್ಮಶಾಲಿ ಸಮಾಜದ ಸೇವಾ ಕಾರ್ಯಗಳಿಗೆ ವಿನಿಯೋಗಿಸಲಾಗುವುದು. ಅಲ್ಲದೆ, ಸಮಾಜದ ವಿದ್ಯಾರ್ಥಿಗಳಿಗೆ ದೊಡ್ಡ ಮೊತ್ತದ ವಿದ್ಯಾರ್ಥಿವೇತನ ನೀಡುವ ಉದ್ದೇಶದಿಂದ ಈ ಆದಾಯವನ್ನು ದೇಣಿಗೆಯಾಗಿ ನೀಡುವುದಾಗಿ ಭರವಸೆ ನೀಡಿದರು.

ಬೆಂಗಳೂರಿನ ಡೈನಾಟಿಕ್ ಟೂಲ್ಸ್ ಆ್ಯಂಡ್ ಡಿವೈಸಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಿ. ದಾಮೋದರ ಅವರು ‘ವಿದ್ಯಾಸೇತು’ ಆ್ಯಪ್ ಬಿಡುಗಡೆಗೊಳಿಸಿ, ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇದು ಸಹಕಾರಿಯಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿ ಗಿರೀಶ್ ಶೆಟ್ಟಿಗಾರ್ ಮಾತನಾಡಿ, ಸಮಾಜದ ಸಂಸ್ಥೆಗಳನ್ನು ಸ್ಥಾಪಿಸಿದ ಪೂರ್ವಸೂರಿಗಳನ್ನು ಸ್ಮರಿಸಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಅವರಿಂದ ಉಪಕೃತರಾದ ಸಮಾಜಬಾಂಧವರ ಕರ್ತವ್ಯವಾಗಿದೆ ಎಂದರು. ಸುಂದರ ಎಸ್. ಶೆಟ್ಟಿಗಾರ್ ಎಕ್ಕಾರು ಮಾತನಾಡಿ, ವಿದ್ಯಾವರ್ಧಕ ಸಂಘವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಉತ್ತಮ ಫಲಿತಾಂಶ ನೀಡಲಿ ಎಂದು ಹಾರೈಸಿದರು.

ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ ಮಾತನಾಡಿ, ಸಮಾಜದ ಸಂಸ್ಥಾಪಕರನ್ನು ಸ್ಮರಿಸುವುದು ಹಿಂದೂ ಪರಂಪರೆಯಲ್ಲಿ ಪ್ರತಿಪಾದಿಸಿರುವ ಋಣತ್ರಯಗಳ ಸಂದಾಯದ ಭಾಗವಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ಕಟೀಲ್, ವಿದ್ಯಾಧರ ಕಾರ್ಕಳ, ರಘುವೀರ ಶೆಟ್ಟಿಗಾರ್ ಪರ್ಕಳ ಹಾಗೂ ಡಾ. ಶಿವಪ್ರಸಾದ್ ಕೆ. ಅವರು ವಿಷಯಾಧಾರಿತ ಸಂವಾದದ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಸ್ಪೂರ್ತಿ ತುಂಬಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿಠಲ ಶೆಟ್ಟಿಗಾರ್ ಮಾತನಾಡಿ, ವಿದ್ಯಾರ್ಥಿಗಳು ಕೀಳರಿಮೆಯನ್ನು ತೊರೆದು ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಿ ಯಶಸ್ಸು ಸಾಧಿಸಬೇಕು. ಸಂಘವು ವಿದ್ಯಾರ್ಥಿಗಳ ಉನ್ನತಿಗಾಗಿ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಲ್ಲೂ ಆಸಕ್ತಿಯಿಂದ ಭಾಗವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆರು ಮಂದಿ ಸಂಸ್ಥಾಪಕರ ಪರವಾಗಿ ಅವರ ಉತ್ತರಾಧಿಕಾರಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಾಪು ದೇವಸ್ಥಾನದ ಬಾಲಕಿಯರು ಪ್ರಾರ್ಥಿಸಿದರು. ಡಾ. ಜಯರಾಮ ಶೆಟ್ಟಿಗಾರ್ ಬಾರ್ಕೂರು ಅವರು ‘ವಿದ್ಯಾಸೇತು’ ಆ್ಯಪ್ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ರತ್ನಾಕರ ಇಂದ್ರಾಳಿ ಸ್ವಾಗತಿಸಿದರು. ಎಸ್. ಹೊನ್ನಯ್ಯ ಶೆಟ್ಟಿಗಾರ್ ಸುರತ್ಕಲ್ ಹಾಗೂ ಅಶೋಕ ಶೆಟ್ಟಿಗಾರ್ ಕಾಪು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಡಾ. ವೆಂಕಟ್ರಾಯ ಶೆಟ್ಟಿಗಾರ್ ವಂದಿಸಿದರು.

Ads on article

Advertise in articles 1

advertising articles 2

Advertise under the article