ನಂದಳಿಕೆಯಲ್ಲಿ ಎರಡನೇ ಹರಿಹರನ ಕಾಲದ ಅಪರೂಪದ ಶಿಲಾಶಾಸನ ಪತ್ತೆ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ನಂದಳಿಕೆಯ ಕೆದಿಂಜೆ ಜುಮಾದಿ ದೈವಸ್ಥಾನದ ಸಮೀಪದ ದಾಸಂದ ಬಾಕ್ಯಾರ್ ಎಂಬಲ್ಲಿ ವಿಜಯನಗರ ಸಾಮ್ರಾಜ್ಯದ ಸಂಗಮ ರಾಜಮನೆತನದ ಪ್ರಸಿದ್ಧ ದೊರೆ ಎರಡನೇ ಹರಿಹರನ ಆಳ್ವಿಕೆಯ ಕಾಲಕ್ಕೆ ಸೇರಿದ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದೆ.
ಬಳಪದ ಕಲ್ಲಿನಲ್ಲಿ ಕೆತ್ತಲಾಗಿರುವ ಈ ಆಕರ್ಷಕ ಶಾಸನವು ಕನ್ನಡ ಲಿಪಿಯಲ್ಲಿ ಕನ್ನಡ-ತುಳು ಮಿಶ್ರಿತ ಭಾಷೆಯಲ್ಲಿದೆ. ಶಾಸನವನ್ನು ಮುಲ್ಕಿಯ ಸುಂದರ ರಾಮ್ ಶೆಟ್ಟಿ ಕಾಲೇಜಿನ ಪ್ರಥಮ ಬಿ.ಎ. ಪುರಾತತ್ವ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಸಿಂಚಿತ್ ಎಂ. ಮತ್ತು ಶೋಧನ್ ಬಿ. ಅವರು ಮೊದಲು ಗುರುತಿಸಿ, ಆದಿಮ ಕಲಾ ಟ್ರಸ್ಟ್ನ ಸ್ಥಾಪಕ ಸಂಚಾಲಕ ಪ್ರೊ. ಟಿ. ಮುರುಗೇಶಿ ಅವರ ಗಮನಕ್ಕೆ ತಂದಿದ್ದಾರೆ. ಈ ವಿದ್ಯಾರ್ಥಿಗಳ ಕಾರ್ಯವನ್ನು ಪ್ರೊ. ಮುರುಗೇಶಿ ಅಭಿನಂದಿಸಿದ್ದಾರೆ.
ಶಾಸನದ ಕಾಲಮಾನವನ್ನು ಶಕ ವರ್ಷ 1039 ಎಂದು ನಮೂದಿಸಲಾಗಿದ್ದು, ಪ್ರಭವ ಸಂವತ್ಸರದ ಉಲ್ಲೇಖವಿದೆ. ಆದರೆ ಈ ಕಾಲಮಾನ ವಿಜಯನಗರ ಸಾಮ್ರಾಜ್ಯದ ಇತಿಹಾಸಕ್ಕೆ ಹೊಂದಿಕೆಯಾಗುವುದಿಲ್ಲ. ಶಾಸನದಲ್ಲಿರುವ ಇತರ ಐತಿಹಾಸಿಕ ಮಾಹಿತಿಗಳ ಆಧಾರದಲ್ಲಿ ಇದು ಶಕ ವರ್ಷ 1309 ಆಗಿರಬಹುದು ಎಂದು ಅಂದಾಜಿಸಲಾಗಿದೆ. ಶಕ 1309 ಪ್ರಭವ ಸಂವತ್ಸರಕ್ಕೆ ಹೊಂದಿಕೆಯಾಗುವುದರಿಂದ ಈ ಶಾಸನವು ಕ್ರಿ.ಶ. 1387ಕ್ಕೆ, ಅಂದರೆ ಎರಡನೇ ಹರಿಹರನ ಆಳ್ವಿಕೆಯ ಹತ್ತನೇ ವರ್ಷಕ್ಕೆ ಸೇರಿದ್ದಾಗಿದೆ ಎಂದು ಪ್ರೊ. ಮುರುಗೇಶಿ ವಿಶ್ಲೇಷಿಸಿದ್ದಾರೆ.
ಶಾಸನದಲ್ಲಿ ಎರಡನೇ ಹರಿಹರನನ್ನು ಪೂರ್ವ, ದಕ್ಷಿಣ ಮತ್ತು ಪಶ್ಚಿಮ ಸಮುದ್ರಾಧೀಶ್ವರ ಎಂದು ಬಣ್ಣಿಸಲಾಗಿದೆ. ಆತನ ಆಳ್ವಿಕೆಯ ಸಂದರ್ಭದಲ್ಲಿ ಮನ್ಮಹಾ ಪ್ರಧಾನ ಮಲ್ಲಪ್ಪ ಒಡೆಯರು ಬಾರಕೂರು ರಾಜ್ಯದ ಆಡಳಿತಗಾರರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮಲ್ಲಪ್ಪ ಒಡೆಯರು ದತ್ತಾಳ್ವರ ಬಳಿಯ ರಾಜ್ಯವನ್ನು ಸಂಗಣ ಜರ್ಸರಿಗೆ ನೀಡಿದ ವಿಷಯವೂ ಶಾಸನದಲ್ಲಿದೆ.
ಸಂಗಣ ಜರ್ಸರು ನಂದಳಿಕೆಯ ಎರಡು ಬಾಳುಗಳನ್ನು ಕೋಟೀಶ್ವರಾಳ್ವರು ಮತ್ತು ಕಡಂಬಾಳ್ವರು ಎಂಬ ಅಣ್ಣತಮ್ಮಂದಿರಿಗೆ ಬ್ರಹ್ಮದಾಯವಾಗಿ ನೀಡಿರುವುದನ್ನು ಶಾಸನ ವಿವರಿಸುತ್ತದೆ. ಈ ಎರಡೂ ಬಾಳಿನವರು ಕಾರ್ಕಳದ ಬ್ರಹ್ಮೀಶ್ವರ ದೇವರಿಗೆ ಪುರಾಣ ಹೇಳುವ ಬ್ರಾಹ್ಮಣರಿಗೆ ಪ್ರತಿವರ್ಷ ಆರು ಮೂಡೆ ಭತ್ತವನ್ನು ನೀಡಬೇಕೆಂದು ಧರ್ಮದ ಅಡಕ ಮಾಡಲಾಗಿತ್ತು. ಈ ನಿಯಮ ಉಲ್ಲಂಘಿಸಿದವರು ಅರಸನಿಗೆ 500 ಗದ್ಯಾಣ ಹಾಗೂ ದೇವರಿಗೆ 250 ಗದ್ಯಾಣ ದಂಡ ನೀಡಬೇಕೆಂಬ ಷರತ್ತನ್ನೂ ವಿಧಿಸಲಾಗಿತ್ತು.
ಶಾಸನವನ್ನು ಸಂಗಣ ಜರ್ಸರ ಸೇನಬೋವ ವಿಟ್ಟಣ್ಣ ಎಂಬವರು ಬರೆದಿದ್ದಾರೆ. ಕೊನೆಯಲ್ಲಿ ದಾನಧರ್ಮದ ಮಹತ್ವವನ್ನು ಸಾರುವ ಶಾಪಾಶಯದೊಂದಿಗೆ ಮಂಗಳಾಂತ್ಯ ಮಾಡಲಾಗಿದೆ. ಶಾಸನದಲ್ಲಿ ಸಂಭುವೇ, ಸಾಲೆತ್ತಿಯ, ನಟ್ಟು, ಕಿನ್ನಿ, ಯಿಲಡ ಮೊದಲಾದ ತುಳು ಪದಗಳ ಬಳಕೆಯೂ ಕಂಡುಬಂದಿದ್ದು, ಆ ಕಾಲದ ಭಾಷಾ ಇತಿಹಾಸದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ.
ಈ ಶಿಲಾಶಾಸನವು ಮಧ್ಯಯುಗೀನ ನಂದಳಿಕೆಯ ಅರಸು ಮನೆತನದ ಆರಂಭಿಕ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುತ್ತದೆ. ಶಾಸನದಲ್ಲಿರುವ ಮಾಹಿತಿಯ ಪ್ರಕಾರ, ಸಾಲೆತ್ತಿ ಬಳಿಯ ದಾಸೆಟ್ಟಿಯರ ಅಳಿಯನಾದ ಕೋಟೀಶ್ವರಾಳ್ವರು ನಂದಳಿಕೆಯ ಜನನದ ಸೊಪ್ಪಿಕ್ಕಿದರು ಎಂಬ ಉಲ್ಲೇಖವಿದೆ. ಅಂದರೆ, ಕ್ರಿ.ಶ. 1387ರಲ್ಲಿ ನಂದಳಿಕೆಯಲ್ಲಿ ಅರಮನೆ ನಿರ್ಮಿಸಿದ ಬಗ್ಗೆ ಈ ಶಾಸನದಿಂದ ತಿಳಿದುಬರುತ್ತದೆ ಎಂದು ಪ್ರೊ. ಮುರುಗೇಶಿ ತಿಳಿಸಿದ್ದಾರೆ.
ಅಲ್ಲದೆ, ಶಾಸನದಲ್ಲಿ ಉಲ್ಲೇಖವಾಗಿರುವ ಸಂಗಣ ಜಯ ಜರ್ಸರು ಯಾರು? ಕಾರ್ಕಳದ ಬ್ರಹ್ಮೀಶ್ವರ ದೇವರ ದೈವಸ್ಥಾನ ಎಲ್ಲಿತ್ತು? ಎಂಬ ಕುರಿತು ಇನ್ನಷ್ಟು ಅಧ್ಯಯನ ನಡೆಯಬೇಕಿದೆ. ನಂದಳಿಕೆಯ ಅರಸು ಮನೆತನದ ಇತಿಹಾಸ, ಅಂದಿನ ಆಡಳಿತ ವ್ಯವಸ್ಥೆ, ಭೂದಾನ ಪದ್ಧತಿ, ಧಾರ್ಮಿಕ ಆಚರಣೆ ಹಾಗೂ ತುಳು ಭಾಷೆಯ ಬಳಕೆಯ ಕುರಿತು ಈ ಶಾಸನ ಮಹತ್ವದ ಐತಿಹಾಸಿಕ ಮಾಹಿತಿಯನ್ನು ಒದಗಿಸುತ್ತದೆ.
ಈ ಶಾಸನದ ಅಧ್ಯಯನಕ್ಕೆ ನೆರವಾದ ನಂದಳಿಕೆ ಅರಮನೆಯ ಸುಹಾಸ್ ಹೆಗ್ಡೆ, ಅವರ ತಾಯಿ ಸರಳಾ ಎಸ್. ಹೆಗ್ಡೆ, ಮೂಲ್ಕಿಯ ಗಜನಿ ಫೌಂಡೇಶನ್ ಅಧ್ಯಕ್ಷ ಸುರೇಶ್ ಚಿತ್ರಾಪು ಹಾಗೂ ರಾಣಿ ಚಿಕ್ಕಾಯಿ ತಾಯಿ ಚಾರಿಟೇಬಲ್ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ರಘುರಾಮ್ ಶೆಟ್ಟಿ ಗುಳ್ಳಾಡಿ ಅವರಿಗೆ ಪ್ರೊ. ಟಿ. ಮುರುಗೇಶಿ ಕೃತಜ್ಞತೆ ಸಲ್ಲಿಸಿದ್ದಾರೆ.