ನ.7: ಬಲಾಯಿಪಾದೆ ನಾರಾಯಣಗುರು ಉದ್ಯಾನವನದಲ್ಲಿ 1008 ಹಣತೆ, ಬೃಹತ್ ಗೂಡುದೀಪ ಬೆಳಗುವ ಕಾರ್ಯಕ್ರಮ
ಉಡುಪಿಯ ರಾಷ್ಟ್ರೀಯ ಹೆದ್ದಾರಿ 77ರ ಬಲಾಯಿಪಾದೆ ಬಳಿಯ ಶ್ರೀ ನಾರಾಯಣ ಗುರು ಉದ್ಯಾನವನದಲ್ಲಿ ನವೆಂಬರ್ 7ರ ಶನಿವಾರ ಸಂಜೆ 6.30ಕ್ಕೆ ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುವುದು.
ಈ ಸಂದರ್ಭದಲ್ಲಿ 1008 ಹಣತೆಗಳನ್ನು ಬೆಳಗಿಸುವುದರ ಜೊತೆಗೆ ಬೃಹತ್ ಗೂಡುದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.), ಉಡುಪಿ ಇದರ ಅಧ್ಯಕ್ಷ ಮಿಥುನ್ ಅಮೀನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜನಪ್ರತಿನಿಧಿಗಳು, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್‌ಗಳ ಮಾಜಿ ಸದಸ್ಯರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಶ್ರೀ ನಾರಾಯಣ ಗುರು ಯುವ ವೇದಿಕೆಯು ನಿರಂತರವಾಗಿ ವೈವಿಧ್ಯಮಯ ಹಾಗೂ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.
ಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಪಾಲಿಸಿಕೊಂಡು ಬರುತ್ತಿರುವ ವೇದಿಕೆಯು ಸರ್ವಜಾತಿ ಹಾಗೂ ಸರ್ವಧರ್ಮದ ಜನರಿಗೆ ಗೌರವ ನೀಡುತ್ತಾ, ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಿರುವ ದೀಪಾವಳಿ ಸಂಭ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.