ರೈಲ್ವೆ ಅಂಡರ್‌ಬ್ರಿಡ್ಜ್ ಕಾಮಗಾರಿ ವೇಳೆ ಮಣ್ಣು ಕುಸಿತ: ರೈಲ್ವೆ ಸಿಬ್ಬಂದಿ ಸಾವು, ಮತ್ತೊರ್ವ ಗಂಭೀರ
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಸಮೀಪ ರೈಲ್ವೆ ಅಂಡರ್‌ಬ್ರಿಡ್ಜ್ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಮಣ್ಣು ಕುಸಿದು ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಡರಾತ್ರಿ ನಡೆದಿದೆ.
ಅಳ್ನಾವರ–ಅಂಬೇವಾಡಿ ಸೆಕ್ಷನ್‌ನ ಎಲ್‌ಸಿ ನಂ. 11ರ ವ್ಯಾಪ್ತಿಯ ದಾಂಡೇಲಿ ತಾಲೂಕಿನ ಕರ್ಕಾ–ಬರ್ಚಿ ರೈಲ್ವೆ ಮಾರ್ಗದಲ್ಲಿ ಅಂಡರ್‌ಬ್ರಿಡ್ಜ್ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಕಾಮಗಾರಿಗಾಗಿ ತೆಗೆದುಹಾಕಲಾಗಿದ್ದ ಮಣ್ಣು ಏಕಾಏಕಿ ಕುಸಿದು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೈಲ್ವೆ ತಾಂತ್ರಿಕ ಸಿಬ್ಬಂದಿ ಮಹೇಶ ಶೇಖಪ್ಪ ತಳವಾರ (33) ಅವರ ಮೇಲೆ ಬಿದ್ದಿದೆ.
ಮಣ್ಣಿನಡಿ ಸಿಲುಕಿದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಗ್ರಾಮದ ನಿವಾಸಿ ಮಹೇಶ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ರೈಲ್ವೆ ಇಲಾಖೆಯ ಸೀನಿಯರ್ ಸೆಕ್ಷನ್ ಇಂಜಿನಿಯರ್ ಮಕ್ತುಂ ಹುಸೇನ್ ಮಹಮ್ಮದ್ ಹುಸೇನ್ ಮುಲ್ಲಾ (57) ಅವರಿಗೂ ಗಂಭೀರ ಗಾಯಗಳಾಗಿವೆ.
ಗಾಯಾಳುವನ್ನು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಶಿವಾನಂದ ಅಂಬಿಗೇರ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.