ನ.9: ಪೇಜಾವರ ಮಠದ ಹಿಂಭಾಗದಲ್ಲಿ ಧನ್ವಂತರಿ ಯಾಗದ ಕಾರ್ಯಾಲಯ ಉದ್ಘಾಟನೆ
ಸನಾತನ ಸಂಸ್ಥೆಯ ವತಿಯಿಂದ ನವೆಂಬರ್ 29ರಂದು ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆಯಲಿರುವ ಮಹಾ ಧನ್ವಂತರಿ ಯಾಗದ ಪ್ರಚಾರ ಹಾಗೂ ಸಿದ್ಧತೆಗಳಿಗಾಗಿ ನವೆಂಬರ್ 9ರಂದು ಪೇಜಾವರ ಮಠದ ಹಿಂಭಾಗದಲ್ಲಿ ನೂತನ ಕಾರ್ಯಾಲಯ ಉದ್ಘಾಟನೆಗೊಳ್ಳಲಿದೆ ಎಂದು ಆಯೋಜನಾ ಸಮಿತಿಯ ಗುರುಪ್ರಸಾದ್ ಗೌಡ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸ್ವಾಸ್ಥ್ಯ ಹದಗೆಡುತ್ತಿರುವ ಇಂದಿನ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಆಯುರ್ವೇದದ ಆದಿದೇವತೆ ಧನ್ವಂತರಿಯ ಆರಾಧನೆಯೊಂದಿಗೆ ಮಹಾ ಧನ್ವಂತರಿ ಯಾಗ ಆಯೋಜಿಸಲಾಗುತ್ತಿದೆ. ನವೆಂಬರ್ ತಿಂಗಳಲ್ಲಿ ಉಡುಪಿಯಲ್ಲಿ ಈ ಯಾಗ ನಡೆಯಬೇಕೆಂದು ಸಾವಿರಾರು ವರ್ಷಗಳ ಹಿಂದೆಯೇ ತಾಳೆಗರಿಗಳಲ್ಲಿ ಉಲ್ಲೇಖವಿದೆ ಎಂದು ತಿಳಿಸಿದರು.
ಯಾಗದ ಧಾರ್ಮಿಕ ವಿಧಿವಿಧಾನಗಳನ್ನು ತಮಿಳುನಾಡಿನ ಪುರೋಹಿತರು ನೆರವೇರಿಸಲಿದ್ದಾರೆ. ಯಾಗದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ನವೆಂಬರ್ 9ರಂದು ಸಂಜೆ 4 ಗಂಟೆಗೆ ಪೇಜಾವರ ಶ್ರೀಗಳು ನೂತನ ಕಾರ್ಯಾಲಯವನ್ನು ಉದ್ಘಾಟಿಸಲಿದ್ದಾರೆ. ನವೆಂಬರ್ 29ರಂದು ನಡೆಯಲಿರುವ ಮಹಾ ಧನ್ವಂತರಿ ಯಾಗದಲ್ಲಿ ಪಾಲ್ಗೊಳ್ಳಲು ಈಗಾಗಲೇ ಸುಮಾರು 6 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ರಮಾನಂದ ಗೌಡ, ಸಮಾಜಸೇವಕ ವಿಜಯ್ ಕೊಡವೂರು, ಶ್ರೀನಿವಾಸ ಗಾಂವಸ್ಕರ್ ಮೊದಲಾದವರು ಉಪಸ್ಥಿತರಿದ್ದರು