-->
ತೆಂಕನಿಡಿಯೂರಿನಲ್ಲಿ ವಿಶ್ವವಿದ್ಯಾಲಯ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್: ಮಂಗಳೂರು ವಿವಿಗೆ ಸಮಗ್ರ ಪ್ರಶಸ್ತಿ

ತೆಂಕನಿಡಿಯೂರಿನಲ್ಲಿ ವಿಶ್ವವಿದ್ಯಾಲಯ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್: ಮಂಗಳೂರು ವಿವಿಗೆ ಸಮಗ್ರ ಪ್ರಶಸ್ತಿ


ಉಡುಪಿಯ ತೆಂಕನಿಡಿಯೂರಿನಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸಮಗ್ರ ಚಾಂಪಿಯನ್‌ಶಿಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ
.


ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿ ಜಿಲ್ಲಾಡಳಿತ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಆಶ್ರಯದಲ್ಲಿ ಶನಿವಾರ ತೆಂಕನಿಡಿಯೂರು ಕ್ರೀಡಾಂಗಣದಲ್ಲಿ ಪಂದ್ಯಾಕೂಟ ನಡೆಯಿತು.


ಪುರುಷರ 10 ಕಿ.ಮೀ. ಓಟಕ್ಕೆ ಶಾಸಕ ಯಶ್‌ಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಎಚ್.ಎನ್. ಗೋಪಾಲಕೃಷ್ಣ ಚಾಲನೆ ನೀಡಿದರು. ಮಹಿಳೆಯರ ಓಟಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಂಗಳೂರು ವಿವಿ ಕುಲಸಚಿವ ಸಂತೋಷ್ ಬಿ. ಜಗಲಸಾರ್, ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಿಭಾಗದ ಜಂಟಿ ನಿರ್ದೇಶಕಿ ಡಾ. ಕವಿತಾ ಕೆ.ಆರ್., ಉದ್ಯಮಿ ಆನಂದ್ ಪಿ. ಸುವರ್ಣ, ಪ್ರಖ್ಯಾತ್ ಶೆಟ್ಟಿ, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ನಾಗರಾಜ್ ಸಂಕೊಳ್ಳಿ, ಲಯನ್ಸ್ ಕ್ಲಬ್ ಅಮೃತ್ ಅಧ್ಯಕ್ಷೆ ಚಂದ್ರಿಕಾ ಜೆ.ಪಿ. ಹಾಗೂ ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಉಪಸ್ಥಿತರಿದ್ದರು.

ಪುರುಷರ ವಿಭಾಗದಲ್ಲಿ ರಾಜಸ್ಥಾನ ವಿಶ್ವವಿದ್ಯಾನಿಲಯ ಜೈಪುರ ಪ್ರಥಮ, ಕ್ಯಾಲಿಕಟ್ ವಿಶ್ವವಿದ್ಯಾನಿಲಯ ದ್ವಿತೀಯ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ತೃತೀಯ ಸ್ಥಾನ ಪಡೆದವು. ಮಹಿಳೆಯರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರಥಮ, ಹರಿಯಾಣದ ರೋಹ್ಟಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯ ದ್ವಿತೀಯ ಹಾಗೂ ಕೇರಳದ ಕೊಟ್ಟಾಯಂ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯ ತೃತೀಯ ಸ್ಥಾನ ಗಳಿಸಿದವು. ಎರಡೂ ವಿಭಾಗಗಳ ಸಾಧನೆಯ ಆಧಾರದಲ್ಲಿ ಮಂಗಳೂರು ವಿವಿ ಸಮಗ್ರ ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡಿತು.

ಪುರುಷರ 10 ಕಿ.ಮೀ. ಓಟದಲ್ಲಿ ಮುಂಬೈ ವಿಶ್ವವಿದ್ಯಾನಿಲಯದ ಸ್ವರಾಜ್ ಸಂದೀಪ್ ಜೋಷಿ ಪ್ರಥಮ, ಮಂಗಳೂರು ವಿವಿಯ ಶೈಲೇಶ್ ಕುಶ್ವಾಹ ದ್ವಿತೀಯ, ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದ ಅವಕಾಶ್ ತೃತೀಯ ಹಾಗೂ ಸಿಜಿಸಿ ಮೊಹಾಲಿಯ ದಿನೇಶ್ ನಾಲ್ಕನೇ ಸ್ಥಾನ ಪಡೆದರು.

ಮಹಿಳೆಯರ 10 ಕಿ.ಮೀ. ಓಟದಲ್ಲಿ ಕೇರಳದ ಕೊಟ್ಟಾಯಂ ಮಹಾತ್ಮ ಗಾಂಧಿ ವಿಶ್ವವಿದ್ಯಾನಿಲಯದ ರಾಶಿ ಸಿ.ಎಂ. ಪ್ರಥಮ, ಅದೇ ವಿವಿಯ ಜಿನ್ಸಿ ಜಿ. ದ್ವಿತೀಯ, ರಾಜಸ್ಥಾನದ ಬಿಕಾನೇರ್ ಮಹಾರಾಜ ಗಂಗಾಸಿಂಗ್ ವಿಶ್ವವಿದ್ಯಾನಿಲಯದ ವಂದನಾ ಪಟೇಲ್ ತೃತೀಯ ಹಾಗೂ ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾನಿಲಯದ ಪೂಜಾ ನಾಲ್ಕನೇ ಸ್ಥಾನ ಗಳಿಸಿದರು.

ವೈಯಕ್ತಿಕ ವಿಭಾಗದಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗಗಳ ಪ್ರಥಮ ನಾಲ್ಕು ಸ್ಥಾನಗಳ ವಿಜೇತರಿಗೆ ಕ್ರಮವಾಗಿ 10,000 ರೂ., 7,500 ರೂ., 5,000 ರೂ. ಹಾಗೂ 2,500 ರೂ. ನಗದು ಬಹುಮಾನವನ್ನು ಆಳ್ವಾಸ್ ಕಾಲೇಜಿನ ಡಾ. ಮೋಹನ್ ಆಳ್ವಾ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಸಂಘದ (ಎಐಯು) ನವದೆಹಲಿಯ ವೀಕ್ಷಕ ಡಾ. ಜಯಪ್ರಕಾಶ್, ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಕಾಲೇಜೊಂದು ರಾಷ್ಟ್ರಮಟ್ಟದ ಪಂದ್ಯಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಶ್ಲಾಘನೀಯ. ಶೂನ್ಯ ಪ್ರತಿಭಟನೆ ಹಾಗೂ ಶೂನ್ಯ ಗಾಯಗಳು ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೆಲವೇ ಕೆಲವು ರಾಷ್ಟ್ರಮಟ್ಟದ ಪಂದ್ಯಾಕೂಟಗಳಲ್ಲಿ ಇದೂ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜಾ, ಕಾಲೇಜಿನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ವಿ. ಗಾಂವ್ಕರ್, ಸಿಡಿಸಿ ಸದಸ್ಯ ಪ್ರವೀಣ್ ಕುಮಾರ್, ಧನಂಜಯ ಕುಂದರ್ ಉಪಸ್ಥಿತರಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.

ಪಂದ್ಯಾಕೂಟದಲ್ಲಿ ದೇಶದ ವಿವಿಧ ವಿಶ್ವವಿದ್ಯಾನಿಲಯಗಳಿಂದ ಸುಮಾರು 850 ಪುರುಷ ಕ್ರೀಡಾಪಟುಗಳು, 650 ಮಹಿಳಾ ಕ್ರೀಡಾಪಟುಗಳು ಹಾಗೂ 100 ಅಧಿಕಾರಿಗಳು ಸೇರಿದಂತೆ ಒಟ್ಟು 1,600 ಮಂದಿ ಭಾಗವಹಿಸಿದ್ದರು.

ತೆಂಕನಿಡಿಯೂರು ಕಾಲೇಜು ಮೈದಾನದಿಂದ ಆರಂಭಗೊಂಡ 10 ಕಿ.ಮೀ. ಓಟ ಹಂಪನಕಟ್ಟೆ, ಕದಿಕೆ, ಆಸರೆ ಬೀಚ್, ಕೆಮ್ಮಣ್ಣು ಮೂಲಕ ಸಾಗಿ ಮತ್ತೆ ಹಂಪನಕಟ್ಟೆ ಮಾರ್ಗವಾಗಿ ತೆಂಕನಿಡಿಯೂರು ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡಿತು

Ads on article

Advertise in articles 1

advertising articles 2

Advertise under the article