-->
 ಪ್ರದೀಪ್ ಸಾವಿಗೆ ಪೊಲೀಸ್ ಇಲಾಖೆಯೇ ಹೊಣೆ: ಎಸ್ಪಿಯನ್ನೂ ವಿಚಾರಣೆಗೊಳಪಡಿಸಿ- ಶ್ರೀಕಾಂತ್ ಶೆಟ್ಟಿ

ಪ್ರದೀಪ್ ಸಾವಿಗೆ ಪೊಲೀಸ್ ಇಲಾಖೆಯೇ ಹೊಣೆ: ಎಸ್ಪಿಯನ್ನೂ ವಿಚಾರಣೆಗೊಳಪಡಿಸಿ- ಶ್ರೀಕಾಂತ್ ಶೆಟ್ಟಿ


ಪ್ರದೀಪ್ ಪೂಜಾರಿ ಸಾವಿನ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ನವೆಂಬರ್ 11ರಂದು ಉಡುಪಿಯಲ್ಲಿ ಜಿಲ್ಲಾ ಪೊಲೀಸ್ ವ್ಯವಸ್ಥೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀಕಾಂತ್ ಶೆಟ್ಟಿ ತಿಳಿಸಿದರು.

ಉಡುಪಿಯಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಪೆರ್ಡೂರಿನ ಪ್ರದೀಪ್ ಪೂಜಾರಿ ಸಾವಿನ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ಸಂಬಂಧಿಸಿ ಕೇವಲ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಹಿರಿಯಡ್ಕ ಪಿಎಸ್ಐ ಅವರನ್ನು ದೀಪಾವಳಿ ರಜೆಗೆ ಮನೆಗೆ ಕಳುಹಿಸಿರುವುದನ್ನು ಹೊರತುಪಡಿಸಿ ಯಾವುದೇ ಮಹತ್ವದ ಕ್ರಮ ಕೈಗೊಂಡಿಲ್ಲ ಎಂದು ಹಿಂದೂಪರ ಸಂಘಟನೆ ಮುಖಂಡ ಶ್ರೀಕಾಂತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರದೀಪ್ ಪೂಜಾರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ವರಿಷ್ಠಾಧಿಕಾರಿಗಳು ನೀಡುತ್ತಿರುವ ಏಕಪಕ್ಷೀಯ ಹೇಳಿಕೆಗಳು ಪೆರ್ಡೂರು ಗ್ರಾಮಸ್ಥರು, ಪ್ರದೀಪ್ ಕುಟುಂಬಸ್ಥರು ಹಾಗೂ ಆತನೊಂದಿಗೆ ಗುರುತಿಸಿಕೊಂಡಿರುವವರಿಗೆ ತೀವ್ರ ನೋವುಂಟು ಮಾಡಿದೆ. ಬಾಳಿ ಬದುಕಬೇಕಿದ್ದ ಯುವಕನ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸುವ ಬದಲು, ಆತನ ಮೇಲೆ ನಡೆದ ಅನೈತಿಕ ಪೊಲೀಸ್ ಗಿರಿಯ ಬಗ್ಗೆ ಯಾವುದೇ ವಿಷಾದ ವ್ಯಕ್ತಪಡಿಸದೆ, ಸಂತ್ರಸ್ತ ಯುವತಿಯ ವಿಚಾರವನ್ನಷ್ಟೇ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಸ್ತಾಪಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರದೀಪ್ ಸಾವಿನ ಸಮಯದಲ್ಲಿ ಆತ ಆರೋಪಿಯಾಗಿದ್ದನೇ ಹೊರತು ಅಪರಾಧಿ ಎಂದು ಸಾಬೀತಾಗಿರಲಿಲ್ಲ. ಆದರೆ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡುವ ರೀತಿ ಆತನನ್ನು ಅಪರಾಧಿಯೆಂಬಂತೆ ಬಿಂಬಿಸುತ್ತಿದೆ. ಪೊಲೀಸ್ ಅಧಿಕಾರಿಗಳು ಎಲ್ಲರಿಗೂ ನ್ಯಾಯ ಒದಗಿಸುವ ಜವಾಬ್ದಾರಿ ಹೊಂದಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಅವರ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಮುಂದಿನ ತನಿಖೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳನ್ನೂ ತನಿಖೆಯ ವ್ಯಾಪ್ತಿಗೆ ಒಳಪಡಿಸಬೇಕು. ಯಾರ ಮಾತು ಕೇಳಿ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬ ಸತ್ಯವೂ ತನಿಖೆಯಿಂದ ಹೊರಬರಬೇಕು ಎಂದು ಒತ್ತಾಯಿಸಿದರು.

ಪ್ರದೀಪ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಾಗಿ ಆತನ ಸಾವಿಗೆ ಪೊಲೀಸ್ ಇಲಾಖೆಯೇ ನೇರ ಹೊಣೆ  ಆರೋಪಿಸಿದರು.

ಪೊಲೀಸ್ ಇಲಾಖೆಯ ವಿರುದ್ಧ ಧ್ವನಿ ಎತ್ತಿದಾಗ ಪ್ರತಿಭಟನಾಕಾರರಿಗೆ ವಿವಿಧ ರೀತಿಯಲ್ಲಿ ತೊಂದರೆ ನೀಡುವ ಪ್ರಯತ್ನಗಳು ನಡೆಯಬಹುದು. ಆದರೆ, ಅಂತಹ ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ. ನ್ಯಾಯದ ಪರವಾಗಿ ಎತ್ತುವ ಧ್ವನಿಯನ್ನು ಯಾರಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು. 

Ads on article

Advertise in articles 1

advertising articles 2

Advertise under the article