ರಸ್ತೆ ಗುಂಡಿ ಮುಚ್ಚಲು ಆಗ್ರಹಿಸಿ ಹೆದ್ದಾರಿ ತಡೆ: ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ನಿಂದನೆ, ಆರೋಪಿ ಬಂಧನ
ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಮೋಟಾರು ಸೈಕಲ್ ನಿಲ್ಲಿಸಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಲ್ಲದೆ, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪುಚ್ಚಮೊಗರು ನಿವಾಸಿ ಪ್ರಶಾಂತ್ ಅಲಿಯಾಸ್ ಪಚ್ಚು (35) ಎಂದು ಗುರುತಿಸಲಾಗಿದೆ.
ನವೆಂಬರ್ 2ರಂದು ಸಂಜೆ ಸುಮಾರು 6.30ರ ವೇಳೆಗೆ ಮೂಡುಬಿದಿರೆ ಸಮೀಪದ ಪ್ರಾಂತ್ಯ ಗ್ರಾಮದ ಮಹಾವೀರ ಕಾಲೇಜಿನ ಮಾರಿಗುಡಿ ಬಳಿ ಈ ಘಟನೆ ನಡೆದಿದೆ. ಆರೋಪಿ ತನ್ನ ಮೋಟಾರು ಸೈಕಲನ್ನು ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ನಿಲ್ಲಿಸಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಬಲವಂತವಾಗಿ ತಡೆದಿದ್ದಾನೆ. ರಸ್ತೆಯಲ್ಲಿರುವ ಹೊಂಡ-ಗುಂಡಿಗಳನ್ನು ಮುಚ್ಚಲು ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಬರಬೇಕು. ತಕ್ಷಣ ಡಾಮರೀಕರಣ ಮಾಡದಿದ್ದರೆ ಈ ರಸ್ತೆಯಲ್ಲಿ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಉದ್ಧಟತನ ಪ್ರದರ್ಶಿಸಿದ್ದಾನೆ ಎನ್ನಲಾಗಿದೆ.
ಇದರಿಂದ ಮೂಡುಬಿದಿರೆಯಿಂದ ಬೆಳ್ತಂಗಡಿ ಕಡೆಗೆ ಸಾಗುವ ಪ್ರಮುಖ ರಾಜ್ಯ ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಸಂಚಾರ ಸುಗಮಗೊಳಿಸಲು ಮುಂದಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರೊಂದಿಗೂ ಆರೋಪಿ ದುರ್ವರ್ತನೆ ತೋರಿದ್ದಾನೆ. ಮೂಡುಬಿದಿರೆ ಇನ್‌ಸ್ಪೆಕ್ಟರ್ ವಿರುದ್ಧ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಅಧಿಕಾರ ಇಲ್ಲಿ ನಡೆಯುವುದಿಲ್ಲ ಎಂದು ಹೇಳುವ ಮೂಲಕ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ನಿಂದಿಸಿದ ಆರೋಪದ ಮೇಲೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಮಂಗಳವಾರ ಆರೋಪಿಯನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದ್ದಾರೆ.