-->
ಕಾರ್ಕಳ ಪರಶುರಾಮನ ಅಸಲಿ ಪ್ರತಿಮೆ ಪುನರ್ನಿರ್ಮಾಣ, ಥೀಮ್ ಪಾರ್ಕ್ ಅಭಿವೃದ್ಧಿ: ಸರ್ಕಾರದ ನಿರ್ಧಾರ ಸ್ವಾಗತಿಸಿದ ಶುಭದ ರಾವ್

ಕಾರ್ಕಳ ಪರಶುರಾಮನ ಅಸಲಿ ಪ್ರತಿಮೆ ಪುನರ್ನಿರ್ಮಾಣ, ಥೀಮ್ ಪಾರ್ಕ್ ಅಭಿವೃದ್ಧಿ: ಸರ್ಕಾರದ ನಿರ್ಧಾರ ಸ್ವಾಗತಿಸಿದ ಶುಭದ ರಾವ್


ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿ ನಿರ್ಮಿಸಲಾಗಿರುವ ಪರಶುರಾಮನ ಪ್ರತಿಮೆ ಪುನರ್ ನಿರ್ಮಾಣ ಹಾಗೂ ಥೀಮ್ ಪಾರ್ಕ್ ಅಭಿವೃದ್ಧಿಗೆ ರಾಜ್ಯ ಸರಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಮಂಗಳವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳ ವಿಶೇಷ ಸಭೆ ನಡೆಸಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ತಿಳಿಸಿದ್ದಾರೆ.

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 2023ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಕಾರ್ಕಳದ ಬೈಲೂರಿನ ಉಮ್ಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಿಸಲಾಗಿದೆ ಎಂದು ಸುಳ್ಳು ಹೇಳಿ, ರಾಜ್ಯದ ಮುಖ್ಯಮಂತ್ರಿಗಳನ್ನು ಕರೆಸಿ ಉದ್ಘಾಟನೆ ಮಾಡಲಾಗಿತ್ತು. ಬಳಿಕ ಪ್ರತಿಮೆಯ ವಿಚಾರವನ್ನು ಸಮರ್ಥಿಸಿಕೊಳ್ಳಲು ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಲಾಗಿತ್ತು. ಈ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಶಾಸಕರ ನಡೆಗೆ ಇದೀಗ ತೆರೆ ಬೀಳುವ ಕಾಲ ಬಂದಿದೆ. ತಪ್ಪನ್ನು ಪ್ರಶ್ನಿಸಿದ ಹೋರಾಟಗಾರರು ಹಾಗೂ ಕಾರ್ಯಕರ್ತರನ್ನು ಅವಮಾನಿಸಿ ಅಪಹಾಸ್ಯ ಮಾಡಿದವರು ಪಶ್ಚಾತ್ತಾಪ ಪಡುವ ಕಾಲ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು.

ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ ನೀಡಿದ ಮಾರ್ಗದರ್ಶನದಂತೆ ಸರಕಾರ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಪ್ರತಿಮೆ ಪುನರ್ ನಿರ್ಮಾಣಕ್ಕೆ ತಾಂತ್ರಿಕ ಪರಿಣಿತರ ಸಲಹೆ ಪಡೆಯುವುದು, ಥೀಮ್ ಪಾರ್ಕ್‌ನ ಗೋಮಾಳ ಜಮೀನನ್ನು ಪಾರ್ಕ್ ಹೆಸರಿಗೆ ವರ್ಗಾಯಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಹಾಗೂ ಕಾಮಗಾರಿಯನ್ನು ಪಾರದರ್ಶಕವಾಗಿ ನಡೆಸಲು ಹೊಸ ಟೆಂಡರ್ ಕರೆಯುವುದು ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಉಡುಪಿ ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ನಿರ್ಧರಿಸಲಾಗಿದೆ. ಸರಕಾರದ ಈ ಕ್ರಮವನ್ನು ಕಾರ್ಕಳ ಕಾಂಗ್ರೆಸ್ ಸ್ವಾಗತಿಸುತ್ತದೆ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತದೆ ಎಂದರು.

ಥೀಮ್ ಪಾರ್ಕ್ ವಿಚಾರವಾಗಿ ಮಂಗಳವಾರ ವಿಕಾಸಸೌಧದಲ್ಲಿ ಸಭೆ ನಡೆಯುತ್ತಿದ್ದಂತೆಯೇ ಕಾರ್ಕಳ ಶಾಸಕರ ಮತ್ತೊಂದು ನಾಟಕ ಆರಂಭವಾಗಿದೆ. ಸಭೆ ಮುಗಿದ ಸ್ವಲ್ಪ ಹೊತ್ತಿನಲ್ಲಿಯೇ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನಿಂದ ಕಾರ್ಕಳಕ್ಕೆ ವಾಹನ ಜಾಥಾ ಎಂಬ ಪೋಸ್ಟರ್‌ಗಳು ಶಾಸಕರ ಆಪ್ತರ ಸಾಮಾಜಿಕ ಜಾಲತಾಣ ಹಾಗೂ ವೆಬ್ ನ್ಯೂಸ್‌ಗಳಲ್ಲಿ ಹರಿದಾಡುತ್ತಿವೆ.

ಈ ಹಿಂದೆ ಎರಡು ಬಾರಿ ವಾಹನ ಜಾಥಾ ಆಯೋಜನೆಗೆ ಮುಂದಾಗಿ ಜನಸ್ಪಂದನೆ ಇಲ್ಲದ ಕಾರಣ ರದ್ದುಪಡಿಸಲಾಗಿತ್ತು. ಈ ಬಾರಿಯ ಜಾಥಾ ವಿಚಿತ್ರವಾಗಿದ್ದು, ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸಬೇಕಾದವರು ಬೆಂಗಳೂರಿನಿಂದ ಕಾರ್ಕಳಕ್ಕೆ ಹಿಂದಿರುಗುತ್ತಿದ್ದಾರೆ. ಪಾರ್ಕ್‌ನಲ್ಲಿ ಮುಂದೆ ನಡೆಯಲಿರುವ ಕಾಮಗಾರಿಗಳು ತಮ್ಮ ಹೋರಾಟದ ಫಲ ಎಂದು ಬಿಂಬಿಸಲು ಈ ಜಾಥಾ ಆಯೋಜಿಸಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಶುಭದರಾವ್ ಟೀಕಿಸಿದರು.

ರಾಜ್ಯ ಸರಕಾರದ ನಿರ್ಧಾರದಿಂದ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಮತ್ತೊಂದು ಹಂತದ ಜಯ ಸಿಕ್ಕಂತಾಗಿದೆ. ಪ್ರಶ್ನಿಸಿದವರ ಮೇಲೆ ಪೊಲೀಸ್ ಪ್ರಕರಣಗಳು, ಅಧಿಕಾರಿಗಳು ಅನುಭವಿಸಿದ ಹಿಂಸೆ, ಕಾರ್ಯಕರ್ತರ ನಡುವಿನ ಸಂಘರ್ಷಗಳು ಹಾಗೂ ಆರೋಪ-ಪ್ರತ್ಯಾರೋಪಗಳಿಗೆ ಕೊನೆ ಹಾಡುವ ಕಾಲ ಸನ್ನಿಹಿತವಾಗಿದೆ. ಸರಕಾರದ ಈ ಕ್ರಮಕ್ಕೆ ಯಾವುದೇ ಅಡ್ಡಿಪಡಿಸದೆ ಸಹಕರಿಸುವ ಬುದ್ಧಿಯನ್ನು ಶಾಸಕರಿಗೆ ಹಾಗೂ ಅವರ ಆಪ್ತರಿಗೆ ಪರಶುರಾಮನೇ ಕರುಣಿಸಲಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ ಸುಬಿತ್ ಕುಮಾರ್ ಎನ್.ಆರ್., ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ, ಮಾಜಿ ಸದಸ್ಯ ವಿವೇಕಾನಂದ ಶೆಣೈ ಹಾಗೂ ಕೆಎಂಎಫ್ ಮಂಗಳೂರು ನಿರ್ದೇಶಕ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article