ತ್ರಾಸಿ–ಮುಳ್ಳಿಕಟ್ಟೆ ಫ್ಲೈಓವರ್ ಮೇಲೆ ಮೀನು ಸಾಗಾಟ ವಾಹನ ಪಲ್ಟಿ; ಚಾಲಕ ಅಪಾಯದಿಂದ ಪಾರು
Friday, November 06, 2026
ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ–ಮುಳ್ಳಿಕಟ್ಟೆ ಫ್ಲೈಓವರ್ ಮೇಲೆ ಮೀನು ಸಾಗಿಸುತ್ತಿದ್ದ ವಾಹನವೊಂದು ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾದ ಘಟನೆ ಶುಕ್ರವಾರ ಸಂಭವಿಸಿದೆ.
ಮಹಾರಾಷ್ಟ್ರ ನೋಂದಣಿಯ ಈ ವಾಹನವು ಮುಂಬೈಯಿಂದ ಕುಂದಾಪುರದತ್ತ ತೆರಳುತ್ತಿದ್ದ ವೇಳೆ ಏಕಾಏಕಿ ಟೈರ್ ಸ್ಫೋಟಗೊಂಡಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಗೆ ಉರುಳಿ ಬಿದ್ದಿದೆ. ಘಟನೆಯ ವೇಳೆ ವಾಹನದಲ್ಲಿ ಚಾಲಕ ಮಾತ್ರ ಇದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಹೆದ್ದಾರಿ ಗಸ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಕ್ರೇನ್ ಸಹಾಯದಿಂದ ಪಲ್ಟಿಯಾಗಿದ್ದ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.
ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗುವುದನ್ನು ತಪ್ಪಿಸಲಾಯಿತು.