-->
 ಜೆನ್ ಜೀ ಹೋರಾಟದಂತೆ ತಮ್ಮ ಹಕ್ಕುಗಳಿಗಾಗಿ ಯುವಕರು ಜಾಗೃತರಾಗಿ: ಜಯಪ್ರಕಾಶ್ ಹೆಗ್ಡೆ

ಜೆನ್ ಜೀ ಹೋರಾಟದಂತೆ ತಮ್ಮ ಹಕ್ಕುಗಳಿಗಾಗಿ ಯುವಕರು ಜಾಗೃತರಾಗಿ: ಜಯಪ್ರಕಾಶ್ ಹೆಗ್ಡೆ


ದೆಹಲಿಯಲ್ಲಿ ಜೆನ್‌ ಜೀ ಯುವಕರು ಪ್ರತಿಭಟನೆ ನಡೆಸಿದ ರೀತಿಯಲ್ಲಿ ಮಣಿಪಾಲ ಭಾಗದ ಯುವಜನರೂ ಎಚ್ಚೆತ್ತುಕೊಂಡು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕರೆ ನೀಡಿದರು. 

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ವೋಟ್ ಚೋರಿ – ದೇಶ್ ಬಚಾವೋ ಅಭಿಯಾನದ ಅಂಗವಾಗಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಬೃಹತ್ ಪ್ರತಿಭಟನೆ ಯಲ್ಲಿ ಅವರು ಮಾತನಾಡಿದರು.

ಇಂದು ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಆದರೆ ಸರಕಾರ ಉದ್ಯೋಗದ ಭರವಸೆ ನೀಡುವುದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸಿದರು. ರಾಮಲೀಲಾದಲ್ಲಿ ನಡೆದ ಪ್ರತಿಭಟನೆ ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ ಎಂದರು. ಜ್ಞಾನೇಶ್ ಕುಮಾರ್ ಚುನಾವಣಾ ಆಯುಕ್ತರಾಗಿದ್ದರೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲ್ಲುತ್ತಿದ್ದರು ಎಂದು ವ್ಯಂಗ್ಯವಾಡಿದರು. 

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಎಸ್‌ಐಆರ್‌ ಪ್ರಕ್ರಿಯೆಯ ಮೂಲಕ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ.  ಸಂವಿಧಾನಕ್ಕೆ ಸಮಸ್ಯೆ ಸೃಷ್ಟಿಸುತ್ತಿರುವವರು ಭಸ್ಮಾಸುರನಂತೆ ತನ್ನ ತಲೆಯ ಮೇಲೆಯೇ ಕೈಯಿಟ್ಟುಕೊಂಡು ತಾವೇ ಸುಟ್ಟುಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಶ್ಚಿಮ ಬಂಗಾಳ ಮತ್ತು ಬಿಹಾರ ಚುನಾವಣೆಗಳ ಬಳಿಕ ದೇಶದ ಜನರು ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಎಸ್‌ಐಆರ್‌ ಮೂಲಕ ಜನರ ಮತದಾನದ ಹಕ್ಕನ್ನು ಕಸಿದುಕೊಂಡು ಬೀಗುವ ಕೆಲಸ ನಡೆಯುತ್ತಿದೆ ಎಂದು ಟೀಕಿಸಿದರು.

ಪ್ರಸ್ತುತ ಚುನಾವಣೆ ನಡೆದರೆ ಅಮೆರಿಕದಲ್ಲಿ ಟ್ರಂಪ್ ಎದುರಿಸಿದ ಪರಿಸ್ಥಿತಿಯಂತೆಯೇ ಪ್ರಧಾನಿ ಮೋದಿ ಅವರಿಗೂ ಹಿನ್ನಡೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಸುಳ್ಳು ಮತ್ತು ಅಪಪ್ರಚಾರದ ಮೂಲಕ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ನೀಟ್ ಪರೀಕ್ಷೆಯ ವಿವಾದದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಯಾಬಿನೆಟ್ ಸಭೆಗೆ ಹಾಜರಾಗದೆ ದೂರ ಉಳಿದಿದ್ದರು ಎಂದು ಆರೋಪಿಸಿದರು.ಜೆನ್‌ ಜೀ ಯುವಜನರ ಪ್ರತಿಭಟನೆ ಸೇರಿದಂತೆ ದೇಶದ ವಿವಿಧ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಮೋದಿ ಮತ್ತು ಅಮಿತ್ ಶಾ ಅವರ ಆಡಳಿತದ ಅವಸಾನ ಕಾಲ ಸಮೀಪಿಸಿದೆ. ಜಾತಿ ಮತ್ತು ಧರ್ಮದ ವಿಷಬೀಜ ಬಿತ್ತುವ ಮೂಲಕ ಸಮಾಜದ ಸಾಮರಸ್ಯವನ್ನು ಹಾಳುಗೆಡವಲಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯಕುಮಾರ್ ಶೆಟ್ಟಿ, ರಮೇಶ್ ಕಾಂಚನ್, ಅಲೆವೂರು ಹರೀಶ್ ಕಿಣಿ, ಜ್ಯೋತಿ ಹೆಬ್ಬಾರ್, ಪ್ರಖ್ಯಾತ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. 



Ads on article

Advertise in articles 1

advertising articles 2

Advertise under the article