ಸೋದೆ ವಿಶ್ವವಲ್ಲಭ ತೀರ್ಥರ ಸಂಕಲ್ಪದಂತೆ ನ.29ರಿಂದ ಮೂರು ದಿನಗಳ ‘ಕದಳೀ ವಿಶ್ವದರ್ಶನ’ ಬಾಳೆ ಮೇಳ
ಸೋದೆ ಶ್ರೀ ವಾದಿರಾಜ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದೂರದೃಷ್ಟಿ ಹಾಗೂ ಸಂಕಲ್ಪದಂತೆ ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಮೂರು ದಿನಗಳ ಕಾಲ ಉಡುಪಿಯ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದ ಸಮೀಪ ರಾಷ್ಟ್ರಮಟ್ಟದ ‘ಕದಳೀ ವಿಶ್ವದರ್ಶನ’ ಬಾಳೆ ಮೇಳವನ್ನು ಆಯೋಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, 2028ರಲ್ಲಿ ನಡೆಯಲಿರುವ ಸೋದೆ ಪರ್ಯಾಯದ ಅಂಗವಾಗಿ ನವೆಂಬರ್ 29ರಂದು ಬೆಳಗ್ಗೆ 7.45ರ ಸುಮಾರಿಗೆ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬಾಳೆ ಮುಹೂರ್ತ ನೆರವೇರಲಿದೆ. ಬಾಳೆ ಕೃಷಿಯ ಮಹತ್ವವನ್ನು ಜನಸಾಮಾನ್ಯರಿಗೆ ಪರಿಚಯಿಸುವುದು ಹಾಗೂ ಕೃಷಿಕರಿಗೆ ಹೊಸ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೇಳದಲ್ಲಿ 100ಕ್ಕೂ ಅಧಿಕ ವಿವಿಧ ತಳಿಗಳ ಬಾಳೆ ಗೊನೆಗಳ ಪ್ರದರ್ಶನ, ವಿವಿಧ ತಳಿಗಳ ಬಾಳೆ ಹಣ್ಣುಗಳ ಮಾರಾಟ ಹಾಗೂ 150ಕ್ಕೂ ಅಧಿಕ ಬಗೆಯ ಬಾಳೆ ತಳಿಗಳ ಪರಿಚಯ ಮತ್ತು ಅವುಗಳ ಸಸಿಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಬಾಳೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಹೊಸ ತಳಿಗಳು, ಸುಧಾರಿತ ಕೃಷಿ ಪದ್ಧತಿಗಳು ಹಾಗೂ ನವೀನ ತಂತ್ರಜ್ಞಾನಗಳ ಪರಿಚಯವಾಗಲಿದೆ. ಬಾಳೆ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಆಸಕ್ತಿ ಹೊಂದಿರುವ ರೈತರು ಹಾಗೂ ಕೃಷಿ ಉದ್ಯಮಿಗಳಿಗೂ ಈ ಮೇಳ ವೇದಿಕೆಯಾಗಲಿದೆ.
ಭಾರತದಲ್ಲಿ ಅಂದಾಜು 500ಕ್ಕೂ ಅಧಿಕ ಬಗೆಯ ಬಾಳೆ ತಳಿಗಳಿದ್ದು, ಅವುಗಳಲ್ಲಿ ಕೆಲವು ತಳಿಗಳಿಗೆ ಇನ್ನೂ ನಿರ್ದಿಷ್ಟ ಹೆಸರುಗಳಿಲ್ಲ. ಇಂತಹ ಹೆಸರಿಲ್ಲದ ತಳಿಗಳ ಪೈಕಿ ಒಂದು ವಿಶಿಷ್ಟ ತಳಿಯನ್ನು ಆಯ್ಕೆ ಮಾಡಿ, ಮೇಳದ ಸಂದರ್ಭದಲ್ಲಿ ಸೋದೆ ಶ್ರೀ ವಾದಿರಾಜ ಮಠದ ವತಿಯಿಂದ ನಾಮಕರಣ ಮಾಡುವ ವಿಶೇಷ ಯೋಜನೆ ರೂಪಿಸಲಾಗಿದೆ. ಆ ಮೂಲಕ ಅಪರೂಪದ ಬಾಳೆ ತಳಿಯನ್ನು ಜನರಿಗೆ ಪರಿಚಯಿಸಿ ಜನಪ್ರಿಯಗೊಳಿಸುವ ಪ್ರಯತ್ನ ನಡೆಯಲಿದೆ.
ಬಾಳೆ ಕೃಷಿಗೆ ಸಂಬಂಧಿಸಿದ ಜ್ಞಾನ ವಿನಿಮಯಕ್ಕಾಗಿ ನ.29ರಂದು ಸಂಜೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಬಾಳೆಯ ವೈಶಿಷ್ಟ್ಯ, ವಿವಿಧ ತಳಿಗಳು ಹಾಗೂ ಕೃಷಿ ಪದ್ಧತಿಗಳ ಕುರಿತು ಕೈಪಿಡಿ ಹೊರತರುವ ಯೋಜನೆಯೂ ಇದೆ. ಬಾಳೆ ಕೃಷಿ ಮಾಡುವವರಿಗೆ ಸಬ್ಸಿಡಿ ಆಧಾರದಲ್ಲಿ ಸಸಿಗಳನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಒಣಗಿಸಿದ ಬಾಳೆಹಣ್ಣನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುವುದು.
ಮೇಳದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ಬಾಳೆ ನಾರಿನಿಂದ ತಯಾರಿಸಿದ ಕರಕುಶಲ ವಸ್ತುಗಳು, ಲೇಖನ ಸಾಮಗ್ರಿಗಳು ಹಾಗೂ ಜವಳಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ರಾಜ್ಯದ ನುರಿತ ಕರಕುಶಲ ಕಲಾವಿದರ ತಂಡದಿಂದ ಬಾಳೆ ನಾರಿನ ಉತ್ಪನ್ನಗಳ ತಯಾರಿಕೆಯ ನೇರ ಪ್ರಾತ್ಯಕ್ಷಿಕೆಯೂ ಇರಲಿದೆ.
ಹ್ಯಾಂಗ್ಯೋ ಸಂಸ್ಥೆಯಿಂದ ಬಾಳೆಹಣ್ಣಿನ ನೂತನ ಐಸ್ಕ್ರೀಮ್ ಬಿಡುಗಡೆಗೊಳ್ಳಲಿದೆ. ಬಾಳೆ ದಿಂಡಿನಿಂದ ನಿರ್ಮಿಸಲಾದ ಮಂಟಪದ ಕಲಾಕೃತಿ ಹಾಗೂ ಶ್ರೀಕೃಷ್ಣನ ಪ್ರತಿಮೆ ವಿಶೇಷ ಆಕರ್ಷಣೆಯಾಗಿರಲಿದೆ. ಬಾಳೆಹಣ್ಣಿನ ವಿವಿಧ ಖಾದ್ಯಗಳ ತಯಾರಿಕೆಯ ಲೈವ್ ಕಿಚನ್, ಬಾಳೆ ದಿಂಡಿನ ಪಾನೀಯ ಹಾಗೂ ಬಾಳೆ ಆಧಾರಿತ ಆಹಾರ ಪದಾರ್ಥಗಳಿಗೂ ಅವಕಾಶ ಕಲ್ಪಿಸಲಾಗಿದೆ.
ಮೇಳದ ಸಂಪೂರ್ಣ ಅಲಂಕಾರಕ್ಕೆ ಬಾಳೆ ದಿಂಡನ್ನೇ ಬಳಸಲಾಗುತ್ತಿದ್ದು, ಇದಕ್ಕಾಗಿ ಶಿರಸಿಯಿಂದ ವಿಶೇಷ ತಂಡ ಆಗಮಿಸಲಿದೆ. ಬಾಳೆಯ ಮಹತ್ವ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಬಾಳೆಯ ಕುರಿತಾಗಿ ವಿಶೇಷ ಪದ್ಯವೊಂದನ್ನು ರಚಿಸಲಾಗಿದ್ದು, ಬಾಳೆ ಮುಹೂರ್ತದ ಪೂರ್ವದಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗುವುದು.
ಬಾಳೆಯನ್ನು ಕೇವಲ ಒಂದು ಕೃಷಿ ಉತ್ಪನ್ನವಾಗಿ ನೋಡದೆ, ಅದರ ಆಹಾರ, ಔಷಧೀಯ, ಆರ್ಥಿಕ, ಸಾಂಸ್ಕೃತಿಕ ಹಾಗೂ ಪರಿಸರ ಸ್ನೇಹಿ ವೈಶಿಷ್ಟ್ಯಗಳನ್ನು ಜನರಿಗೆ ಪರಿಚಯಿಸುವುದು ‘ಕದಳೀ ವಿಶ್ವದರ್ಶನ’ದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಸಮೀಪದ ಹೋಟೆಲ್ಗಳಲ್ಲಿಯೂ ಬಾಳೆಹಣ್ಣು ಮತ್ತು ಬಾಳೆಕಾಯಿಯಿಂದ ತಯಾರಿಸಿದ ವಿವಿಧ ತಿನಿಸುಗಳನ್ನು ಸಿದ್ಧಪಡಿಸುವಂತೆ ತಿಳಿಸಲಾಗಿದೆ. ಸಾವಯವ ಕೃಷಿಗೆ ಉತ್ತೇಜನ ನೀಡುವುದಕ್ಕೂ ಮೇಳದಲ್ಲಿ ಆದ್ಯತೆ ನೀಡಲಾಗುವುದು ಎಂದು ಶ್ರೀಗಳು ವಿವರಿಸಿದರು.
