ಪ್ರದೀಪ್ ಪೂಜಾರಿ ಪ್ರಕರಣ:ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯಪ್ರವೇಶಿಸಲಿ- ಶ್ರೀಕಾಂತ್ ಶೆಟ್ಟಿ
ಪೆರ್ಡೂರಿನ ಪ್ರದೀಪ್ ಪೂಜಾರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯಪ್ರವೇಶಿಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಹಿಂದೂಪರ ಸಂಘಟನೆ ಮುಖಂಡ ಶ್ರೀಕಾಂತ್ ಶೆಟ್ಟಿ ಆಗ್ರಹಿಸಿದರು.
ಪ್ರದೀಪ್ ಪೂಜಾರಿ ಸಾವಿನ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಬಿಲ್ಲವ ಯುವ ವೇದಿಕೆ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿರುವ ಹೇಳಿಕೆ ದಿಗ್ಭ್ರಮೆ ಮೂಡಿಸಿದೆ. ಅವರು ಆರೋಪಿಗಳ ವಕ್ತಾರರಂತೆ ಮಾತನಾಡಿದ್ದಾರೆ ಎಂದು ಶ್ರೀಕಾಂತ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಪ್ರದೀಪ್ ಪೂಜಾರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ಬಂಧನದ ಕುರಿತು ಸ್ಪಷ್ಟವಾಗಿ ಮಾತನಾಡದ ಪೊಲೀಸ್ ವರಿಷ್ಠಾಧಿಕಾರಿಗಳು, ಯುವತಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿ ಮಾಡಿದ 150 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ ಎಂದು ಹೇಳುತ್ತಾರೆ ಎಂದು ಟೀಕಿಸಿದರು.
ಯುವತಿಯನ್ನು ನೊಂದ ಮಹಿಳೆ, ಸಂತ್ರಸ್ತೆ ಎಂದು ಹೇಳಲಾಗುತ್ತಿದೆ. ಆದರೆ ಪ್ರದೀಪ್ ಪೂಜಾರಿಯಿಂದ ಸುಮಾರು 5 ಲಕ್ಷ ರೂ. ಹಣ ವರ್ಗಾವಣೆಯಾಗುವ ಸಂದರ್ಭದಲ್ಲಿ ಆಕೆ ಸಂತ್ರಸ್ತೆಯಾಗಿರಲಿಲ್ಲವೇ? ಎಂದು ಪ್ರಶ್ನಿಸಿದರು.
ಈ ಹೋರಾಟವನ್ನು ಇಲ್ಲಿಗೇ ನಿಲ್ಲಿಸುವುದಿಲ್ಲ. ರಾಜ್ಯಮಟ್ಟದಲ್ಲಿಯೂ ಹೋರಾಟವನ್ನು ಮುಂದುವರಿಸಲಾಗುವುದು. ಆದರೆ ರಾಜ್ಯ ಪೊಲೀಸರ ತನಿಖೆಯ ಮೇಲೆಯೇ ನಂಬಿಕೆ ಇಲ್ಲದಂತಾಗಿದೆ. ಆದ್ದರಿಂದ ರಾಷ್ಟ್ರೀಯ ಮಾನವ ಹಕ್ಕು ಆಯೋಗವೇ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ ಸಮಗ್ರ ತನಿಖೆಗೆ ಕ್ರಮ ಕೈಗೊಂಡು ಪ್ರದೀಪ್ ಪೂಜಾರಿ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.
