ಬ್ರಹ್ಮಾವರ ಫಿಶ್ ಫ್ಯಾಕ್ಟರಿಯಲ್ಲಿ ಅಕ್ಕಪಡೆ ಕಾರ್ಯಾಚರಣೆ: ಶಿಕ್ಷಣ ವಂಚಿತರಾಗಿದ್ದ 30 ಮಕ್ಕಳು ರಕ್ಷಣೆ
Wednesday, November 04, 2026
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಫಿಶ್ ಫ್ಯಾಕ್ಟರಿಯೊಂದರಲ್ಲಿ ಅಕ್ಕ ಪಡೆ ತಂಡವು ಸಿಆರ್‌ಪಿ ಹಾಗೂ ಇಸಿಒ ಇಲಾಖೆಗಳ ಸಹಯೋಗದೊಂದಿಗೆ ನ. 3ರಂದು ವಿಶೇಷ ಕಾರ್ಯಾಚರಣೆ ನಡೆಸಿ, ಶಿಕ್ಷಣದಿಂದ ವಂಚಿತರಾಗಿದ್ದ 30 ಮಕ್ಕಳನ್ನು ರಕ್ಷಿಸಿದೆ.
ಕಾರ್ಯಾಚರಣೆ ವೇಳೆ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮಕ್ಕಳು ಯಾವುದೇ ರೀತಿಯ ಶಿಕ್ಷಣ ಪಡೆಯದೆ, ಶಾಲೆಗೂ ತೆರಳದೆ ಫ್ಯಾಕ್ಟರಿಯ ಸುತ್ತಮುತ್ತಲಿನ ಪ್ರದೇಶದಲ್ಲೇ ಕಾಲ ಕಳೆಯುತ್ತಿರುವುದು ಬೆಳಕಿಗೆ ಬಂದಿದೆ.
6 ವರ್ಷ ಮೇಲ್ಪಟ್ಟ ಹಾಗೂ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಟ್ಟು 30 ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಯಿತು.
ನಂತರ ಮಕ್ಕಳ ಸುರಕ್ಷತೆ ಹಾಗೂ ಆರೈಕೆಯ ದೃಷ್ಟಿಯಿಂದ 7 ಬಾಲಕಿಯರನ್ನು ಬಾಲಕಿಯರ ಬಾಲಮಂದಿರಕ್ಕೆ ಹಾಗೂ 23 ಬಾಲಕರನ್ನು ಬಾಲಕರ ಬಾಲಮಂದಿರಕ್ಕೆ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಯಿತು.