-->
 ಬೈಲೂರು ವಾರ್ಡ್‌ನ ಶ್ರೀನಿವಾಸ ದೇವಸ್ಥಾನ ರಸ್ತೆ ಡಾಮರೀಕರಣಕ್ಕೆ ಆಗ್ರಹಿಸಿ ಮನವಿ

ಬೈಲೂರು ವಾರ್ಡ್‌ನ ಶ್ರೀನಿವಾಸ ದೇವಸ್ಥಾನ ರಸ್ತೆ ಡಾಮರೀಕರಣಕ್ಕೆ ಆಗ್ರಹಿಸಿ ಮನವಿ


31ನೇ ಬೈಲೂರು ವಾರ್ಡ್‌ನ ಶ್ರೀನಿವಾಸ ದೇವಸ್ಥಾನದ ಮುಖ್ಯರಸ್ತೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದವರೆಗೆ ರಸ್ತೆಯನ್ನು ಸಂಪೂರ್ಣ ಡಾಮರೀಕರಣಗೊಳಿಸುವಂತೆ ಆಗ್ರಹಿಸಿ ಮಾಜಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಉಡುಪಿ ನಗರಸಭೆಯ ಪೌರಾಯುಕ್ತ ಮಹಾಂತೇಶ್ ಹಂಗರಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ಶ್ರೀನಿವಾಸ ದೇವಸ್ಥಾನದಿಂದ ಪಿ.ಪಿ.ಸಿ. ಕಾಲೇಜಿನ ಕಡೆಗೆ ಸಾಗುವ ಮುಖ್ಯ ರಸ್ತೆಯ ಒಳಚರಂಡಿ ಪೈಪ್‌ಲೈನ್ ಸಣ್ಣ ಗಾತ್ರದಲ್ಲಿದ್ದ ಕಾರಣ ಕಳೆದ 13 ವರ್ಷಗಳಿಂದ ನಿರಂತರವಾಗಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿತ್ತು. ಇದರಿಂದ ಸ್ಥಳೀಯ ನಾಗರಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆಯಿಂದ ರೂ.97 ಲಕ್ಷ ಅನುದಾನ ಮೀಸಲಿಟ್ಟು, ದೊಡ್ಡ ಗಾತ್ರದ ಒಳಚರಂಡಿ ಪೈಪ್‌ಲೈನ್ ಅಳವಡಿಕೆ ಹಾಗೂ ರಸ್ತೆಯ ಸಂಪೂರ್ಣ ಪೆವರ್ ಫಿನಿಶ್ ಮಾದರಿಯ ಡಾಮರೀಕರಣಕ್ಕೆ ಯೋಜನೆ ರೂಪಿಸಲಾಗಿತ್ತು.

ಒಳಚರಂಡಿ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆದರೆ, ಪಿ.ಪಿ.ಸಿ. ಕಾಲೇಜಿನ ಕಡೆಗೆ ಸಾಗುವ ರಸ್ತೆಯಲ್ಲಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಬಂಡೆ ಕಲ್ಲುಗಳು ಅಡ್ಡಿಯಾಗಿದ್ದವು. ಈ ಪ್ರದೇಶದಲ್ಲಿ ವಸತಿ ಕಟ್ಟಡಗಳಿರುವುದರಿಂದ ಬ್ಲಾಸ್ಟಿಂಗ್ ನಡೆಸಲು ಸಾಧ್ಯವಾಗದೆ, ಮೆಷಿನ್ ಕಟಿಂಗ್ ಮೂಲಕ ಬಂಡೆಗಳನ್ನು ತೆರವುಗೊಳಿಸಬೇಕಾಗಿತ್ತು. ಮಳೆಗಾಲದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾದ ಕಾರಣ ಕಾಮಗಾರಿ ವಿಳಂಬವಾಗಿತ್ತು.

ಪ್ರಸ್ತುತ ಶ್ರೀನಿವಾಸ ದೇವಸ್ಥಾನದ ಮುಖ್ಯರಸ್ತೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದವರೆಗಿನ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು, ಡಾಮರ್ ಪ್ಲಾಂಟ್ ಆರಂಭವಾದ ತಕ್ಷಣ ರಸ್ತೆಯ ಡಾಮರೀಕರಣ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿರುವುದಾಗಿ ರಮೇಶ್ ಕಾಂಚನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಈಗಾಗಲೇ ಡಾಮರ್ ಪ್ಲಾಂಟ್‌ಗಳು ಪುನರಾರಂಭಗೊಂಡಿರುವುದರಿಂದ ನಗರಸಭೆಯ ಪೌರಾಯುಕ್ತರು ಈ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಂಡು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬದಿಂದ ಸ್ಥಳೀಯರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ರಸ್ತೆ ಸಂಚಾರಕ್ಕೆ ಮುಕ್ತವಾಗುವಂತೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯ ವಿಜಯ ಪೂಜಾರಿ, ನಾಮನಿರ್ದೇಶಿತ ಸದಸ್ಯ ಮೊಹಮ್ಮದ್, ಗಣೇಶ್ ನೆರ್ಗಿ, ಚಂದ್ರಮೋಹನ್ ಚಿಟ್ಪಾಡಿ, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ಮೊಹಮ್ಮದ್ ಶೀಶ್, ಸ್ಥಳೀಯರಾದ ಮ್ಯಾಕ್ಸಿಮ್ ಡಿ'ಸೋಜಾ, ಅನಂತಕೃಷ್ಣ ಪ್ರಭು, ಕೃಷ್ಣಾನಂದ ಪೈ, ಪ್ರೀತಿ ಸಾಲಿನ್ಸ್, ಶಹನವಾಜ್, ಕ್ರಿಸ್ಟಿನಾ ಬಂಗೇರ, ಗೀತಾ ರವಿ, ಶೋಭಾ ಭಂಡಾರಿ, ಯಶಸ್ವಿನಿ, ಸಂಜಯ್ ಆಚಾರ್ಯ, ಪ್ರಜ್ವಲ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article