ತುಳುನಾಡಿನ ಗತವೈಭವದ ಕುರುಹು ಬಾರಕೂರು ಕತ್ತಲೆ ಬಸದಿ

ತುಳುನಾಡಿನ ಗತವೈಭವದ ಕುರುಹು ಬಾರಕೂರು ಕತ್ತಲೆ ಬಸದಿ

ಉಡುಪಿ ಜಿಲ್ಲೆಯ ಬಾರಕೂರು ತುಳುನಾಡಿನ ರಾಜಧಾನಿ ಎಂದೇ ಪ್ರಸಿದ್ಧಿ ಪಡೆದಿದೆ. ತುಳುನಾಡಿನ ಗತ ವೈಭವವನ್ನು ಸಾರುವ ಅದೆಷ್ಟೋ ಕುರುಹುಗಳು ಬಾರಕೂರಿನಲ್ಲಿ ಕಾಣಸಿಗುತ್ತದೆ. ಐತಿಹಾಸಿಕ ಪುರಾತನ ದೇವಾಲಯಗಳ ಕೋಟೆ, ಅರಮನೆಗಳ ಬೀಡು ಎಂದು ಕೂಡಾ ಬಾರಕೂರುನಜನಿತವಾಗಿದೆ. ಬಾರಕೂರು ಕ್ರಿ. ೮ನೇ ಶತಮಾನದಲ್ಲಿ ಅಲುಪರ ರಾಜಧಾನಿಯಾಗಿತ್ತು. ಮತ್ತು ವಿಜಯನಗರ ಸಾಮ್ರಾಜ್ಯದ ಪ್ರಾದೇಶಿಕ ರಾಜಧಾನಿಯಾಗಿತ್ತು. ಯಾವುದೇ ತಂತ್ರಜ್ಞಾನಗಳನ್ನು ಬಳಸದೇ ಅಂದಿನ ಕಾಲದ ಕಲೆ, ಕೌಶಲಗಳನ್ನು ಉಪಯೋಗಿಸಿಕೊಂಡು ನಿರ್ಮಿಸಿರುವ  ಅನೇಕ ದೇವಾಲಯಗಳಲ್ಲಿ ಕತ್ತಲೆ ಬಸದಿಯೂ ಒಂದು.




ಅಳುಪಾ ಅರಸರು ೮ನೇ ಶತಮಾನದಿಂದ ೧೨ನೇ ಶತಮಾನದ ಒಳಗೆ ನಿರ್ಮಿಸಿರುವ ಕತ್ತಲೆ ಬಸದಿಯು ಸಂಪೂರ್ಣ ಕಲ್ಲಿನ ಗೋಡೆಗಳಿಂದ ನಿರ್ಮಿಸಲಾಗಿದೆ. ಮೇಲ್ಛಾವಣಿಯನ್ನು ಕೂಡಾ ಕಲ್ಲಿನಿಂದಲೇ ಮುಚ್ಚಲಾಗಿದೆ. ಇದು ಒಂದು ಸಣ್ಣ ಪ್ರವೇಶದ್ವಾರವನ್ನು ಹೊಂದಿದೆ. ಇದನ್ನು ಹೊರತುಪಡಿಸಿದರೆ ಯಾವುದೇ ಬೆಳಕಿನ ಮೂಲವಿಲ್ಲ. ಪ್ರವೇಶದ್ವಾರವು ದಕ್ಷಿಣಕ್ಕೆ ಮುಖಮಾಡಿದೆ ಮತ್ತು ಅದರ ಬದಿಯಲ್ಲಿ ಕೆಲವು ಕೆತ್ತನೆಗಳನ್ನು ಹೊಂದಿದೆ. ಬಸದಿಯನ್ನು ಹೊರಗಿನಿಂದ ನೋಡಬಹುದು. ಪ್ರಸ್ತುತ ಒಳಗೆ ಯಾವುದೇ ದೇವತೆಗಳಿಲ್ಲ ಮತ್ತು ಯಾವುದೇ ಪೂಜೆಯನ್ನು ನಡೆಸಲಾಗುವುದಿಲ್ಲ. ಈ ಬಸದಿಯ ಗರ್ಭ ಗುಡಿಯ ಸುತ್ತಲೂ ಹಾಗೂ ಮೇಲ್ಭಾಗದಲ್ಲಿ ಕಲ್ಲಿನ ಕಂಬಗಳಿವೆ. ಭಗವಾನ್ ಮಹಾವೀರ ವಿಗ್ರಹ ಶಿಥಿಲವಾಗಿರುವ ಕಾರಣ ಅದರ ಜಾಗದಲ್ಲಿ ಕಲ್ಲಿನ ಸಣ್ಣಪುಟ್ಟ ತುಂಡುಗಳನ್ನು ಜೋಡಿಸಿ ಇಡಲಾಗಿದೆ.  ಕತ್ತಲೆ ಬಸದಿಯ ಸಂಕೀರ್ಣವು ೩ ದೇವಾಲಯಗಳನ್ನು ಮತ್ತು ಇನ್ನೂ ಕೆಲವು ಅವಶೇಷಗಳನ್ನು ಹೊಂದಿದೆ. ಒಂದು ದೇವಾಲಯವು ಜೈನ ತೀರ್ಥಂಕರನಿಗೆ ಸಮರ್ಪಿತವಾಗಿದೆ. ಇತರ ಎರಡು ಶಿವ ಮತ್ತು ವಿಷ್ಣುವಿಗೆ ಮೀಸಲಾಗಿದೆ. ನಾಗಕಾಳಿಯ ಗುಡಿಯೂ ಇದೆ. ದೇವಾಲಯದ ರಚನೆಗಳು ಸುಮಾರು ೩೦-೩೫ ಅಡಿ ಉದ್ದ ಮತ್ತು ೨೦-೨೨ ಅಡಿ ಅಗಲವನ್ನು ಹೊಂದಿವೆ. ಬಸದಿಯ  ಪ್ರವೇಶದ್ವಾರದಲ್ಲಿ 20 ಅಡಿ ಎತ್ತರದ ಏಕಶಿಲಾ ಸ್ತಂಭ ಇದೆ. ಅತ್ಯಾಕರ್ಷಕ ಕೆತ್ತನೆಗಳು ಕಲ್ಲಿನ ಮೇಲೆ ಮೂಡಿ ಬಂದಿದೆ. ಹಲವಾರು ಕಲಾಕೃತಿಗಳ ಜೊತೆಗೆ ಲಾಂಛನವನ್ನು ಕೂಡ ಈ ಸ್ತಂಭ ಒಳಗೊಂಡಿದೆ



ಒಂದು ಕಾಲದಲ್ಲಿ ತುಳುನಾಡಿನ ರಾಜಧಾನಿಯಾಗಿ ಮೆರೆದ ಬಾರಕೂರಿನಲ್ಲಿ ಪ್ರತಿಯೊಂದು ಕಲ್ಲುಗಳು ಇತಿಹಾಸವನ್ನು ಸಾರಿ ಹೇಳುತ್ತಿದೆ. ಹೀಗಾಗಿ ಇದೀಗ ಇಲ್ಲಿಗೆ ಬರುವ ಕುತೂಹಲಿಗರ ಸಂಖ್ಯೆಯೂ ಹೆಚ್ಚಾಗುತ್ತಿದೆ, ದೂರದೂರಿನಿಂದಲೂ ಕತ್ತಲೆ ಬಸದಿ ವೀಕ್ಷಿಸಲು ಬಾರಕೂರಿಗೆ ಭೇಟಿ ನೀಡುತ್ತಿದ್ದಾರೆ. ಆದರೆ  ತುಳು ಪರಂಪರೆಯನ್ನು ಸಾರುತ್ತಿದ್ದ ಅನೇಕ ಕುರುಹುಗಳು ಈಗ ಪುರಾತತ್ವ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಪಟ್ಟಂತೆ ಕಂಡು ಬರುತ್ತಿದೆ. ಹಾಗಾಗಿ ಇಲ್ಲಿರುವ ಐತಿಹಾಸಿಕ ಕುರುಹುಗಳನ್ನು ಸಂರಕ್ಷಿಸುವಲ್ಲಿ ಪುರಾತತ್ವ ಇಲಾಖೆಯು ಇನ್ನಷ್ಟು ಮುತುವರ್ಜಿ ವಹಿಸಬೇಕೆಂದು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Ads on article

Advertise in articles 1

download (19)

advertising articles 2

download (19)

Advertise under the article

download (19)