
Bangalore: ಜಪಾನ್ ತಲುಪಿದ ಬನ್ನೇರುಘಟ್ಟ ಜೈವಿಕ ಉದ್ಯಾನದ 4 ಆನೆಗಳು- ವಿಮಾನದ ಮೂಲಕ ರವಾನೆ
25/07/2025
ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಕಳುಹಿಸಿಕೊಟ್ಟ ನಾಲ್ಕು ಆನೆಗಳು ಬೆಂಗಳೂರು ವಿಮಾನ ನಿಲ್ದಾಣದಿಂದ ಸುರಕ್ಷಿತವಾಗಿ ಜಪಾನ್‌ಗೆ ತಲುಪಿವೆ. ಬೆಂಗಳೂರಿನಿ0ದ ಹೊರಟ ಪ್ರಾಣಿಗಳು ಸತತ 20 ಗಂಟೆಗಳ ಪ್ರಯಾಣದ ನಂತರ ಅಲ್ಲಿಗೆ ತಲುಪಿವೆ.
ಜಪಾನ್‌ಗೆ ತೆರಳಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಾಣಿಪಾಲಕರು, ವೈದ್ಯಾಧಿಕಾರಿಗಳು, ಸಿಬ್ಬಂದಿ ಪ್ರಾಣಿಗಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವವರೆಗೂ ನಿಗಾ ವಹಿಸಲಿದ್ದಾರೆ. ಅದಾದ ನಂತರ ಅಲ್ಲಿಂದ ಯಾವ್ಯಾವ ಪ್ರಾಣಿಗಳನ್ನು ಇಲ್ಲಿಗೆ ಕರೆ ತರಬಹುದು ಮತ್ತು ಅವುಗಳನ್ನು ಹಂತ ಹಂತವಾಗಿ ಇಲ್ಲಿಗೆ ಕರೆಸುವ ಸಂಬ0ಧ ಮಾಹಿತಿ ವಿನಿಯೋಗ ಇದೀಗ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಪ್ರಾಣಿಗಳ ವಿನಿಮಯದಂತೆ ಜಪಾನಿನಿಂದ ಇನ್ನೆರಡು ಮೂರು ತಿಂಗಳಲ್ಲಿ ಕ್ಯಾಪುಚಿನ್ ಕೋತಿಗಳು ಮೊದಲಿಗೆ ಬರಲಿವೆ. ಅನಂತರ ಉಳಿದ ಪ್ರಾಣಿಗಳನ್ನು ಇಲ್ಲಿಗೆ ರವಾನಿಸುವ ಯೋಜನೆ ಸಿದ್ಧಗೊಳ್ಳುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರ, ನವದೆಹಲಿಯಿಂದ ಪಡೆದ ಅನುಮೋದನೆ ಮತ್ತು ಇತರ ಇಲಾಖೆಗಳಿಂದ ಪಡೆದ ನಿರಾಕ್ಷೇಪಣಾ ಪ್ರಮಾಣಪತ್ರ ಮತ್ತು ಅನುಮೋದನೆಯಂತೆ 4 ಏಷ್ಯಾದ ಆನೆಗಳು, 1 ಗಂಡು ಮತ್ತು 3 ಹೆಣ್ಣು (ಸುರೇಶ್ - 8 ವರ್ಷ, ಗೌರಿ - 9 ವರ್ಷ, ಶ್ರುತಿ - 7 ವರ್ಷ ಮತ್ತು ತುಳಸಿ - 5 ವರ್ಷ) ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್ನ ಹಿಮೇಜಿ - ಸಫಾರಿ ಪಾರ್ಕ್ ಗೆ ಕಳುಹಿಸಲಾಗುತ್ತಿದೆ. ಈ ಪ್ರಾಣಿ ವಿನಿಮಯವು ದೊಡ್ಡ ಬಹು ವಿನಿಮಯ ಕಾರ್ಯಕ್ರಮದ ಭಾಗವಾಗಿದ್ದು, ಪ್ರತಿಯಾಗಿ, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (4 ಚೀತಾ, 4 ಜಾಗ್ವಾರ್, 4 ಪೂಮಾ, 3 ಚಿಂಪಾ0ಜಿ ಮತ್ತು 8 ಕ್ಯಾಪುಚಿನ್ ಕೋತಿಗಳು) ಬರಲಿವೆ.
ಆನೆಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಸಾಕಾದ ಕಾನ್ಸೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕತಾರ್ ಏರ್ವೇಸ್‌ನ ಸರಕು ವಿಮಾನ B777-200F ದಲ್ಲಿ ಜುಲೈ 24 ರಂದು ಸಾಗಿಸಲಾಗಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ ಹಿಮೇಜಿ ಸೆಂಟ್ರಲ್ ಪಾರ್ಕ್ - ಸಫಾರಿ ಪಾರ್ಕ್ಗೆ ಒಟ್ಟು ಸಾಗಣೆ ಸಮಯ ಸುಮಾರು 20 ಗಂಟೆಗಳು. ಕಳೆದ 6 ತಿಂಗಳುಗಳಿ0ದ ಈ ಸಾಗಣೆಗಾಗಿ ಪ್ರಾಣಿಗಳಿಗೆ ತರಬೇತಿ ನೀಡಲಾಗಿತ್ತು, ಆನೆಗಳು ಉತ್ತಮ ಆರೋಗ್ಯದಿಂದಿದ್ದು ಪ್ರಯಾಣ ಮಾಡಬಹುದಾಗಿರುತ್ತದೆ ಎಂದು ಖಾತರಿ ಪಡಿಸಿಕೊಳ್ಳಲಾಗಿತ್ತು. ಮೈಸೂರು ಮೃಗಾಲಯದಿಂದ 2021ರ ಮೇ ನಲ್ಲಿ ಜಪಾನ್‌ನ ಟೊಯೊಹಾಶಿ ಮೃಗಾಲಯಕ್ಕೆ 3 ಆನೆಗಳನ್ನು ಕಳುಹಿಸಿದ ನಂತರ ಇದು ಜಪಾನ್‌ಗೆ ಆನೆಗಳ ವಿನಿಮಯದ ಎರಡನೇ ಬ್ಯಾಚ್ ಆಗಿದೆ. ಹಿಮೇಜಿ ಸೆಂಟ್ರಲ್ ಪಾರ್ಕ್ನ ಇಬ್ಬರು ಪಶುವೈದ್ಯರು ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬ ಜೀವಶಾಸ್ತ್ರಜ್ಞೆ ಪ್ರಾಣಿಗಳೊಂದಿಗೆ ಜಪಾನ್‌ಗೆ ಪ್ರಯಾಣಿಸಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಒಟ್ಟು 8 ಜನರು ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲು ಆನೆಗಳಿಗೆ ತರಬೇತಿ ನೀಡಲು ಎರಡು ವಾರಗಳ ಕಾಲ ಹಿಮೇಜಿ ಸೆಂಟ್ರಲ್ ಪಾರ್ಕ್ಗೆ ಭೇಟಿ ನೀಡಿ ಅಲ್ಲಿಯೇ ಇರುತ್ತಾರೆ. ಇದಲ್ಲದೇ, ಹಿಮೇಜಿ ಸೆಂಟ್ರಲ್ ಪಾರ್ಕ್ನ ಆನೆ ಪಾಲಕರಿಗೆ ಮೇ 12 ರಿಂದ ಮೇ 25 ರವರೆಗೆ ಸುಮಾರು 20 ದಿನಗಳ ಕಾಲ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ತರಬೇತಿ ನೀಡಲಾಗಿತ್ತು. ಈ ಐತಿಹಾಸಿಕ ಪ್ರಯಾಣವನ್ನು ಕೈಗೊಳ್ಳಲು ಲಾಜಿಸ್ಟಿಕ್ಸ್, ಆಹಾರ ಮತ್ತು ಪಶುವೈದ್ಯಕೀಯ ಆರೈಕೆಗಾಗಿ ಎಲ್ಲಾ ಸಿದ್ದತೆಗಳನ್ನು ಮಡಿಕೊಳ್ಳಲಾಗಿತ್ತು.