
Udupi: ಅಂತಾರಾಜ್ಯ ಕಳ್ಳರಿಬ್ಬರ ಬಂಧನ; ಚಿನ್ನ, ಬೆಳ್ಳಿ ವಸ್ತುಗಳ ಜಪ್ತಿ
22/07/2025 03:11 PM
ಉಡುಪಿಯ ಮಿಷನ್ ಕಂಪೌ0ಡ್ ಬಳಿ ಇರುವ PWD ಕ್ವಾಟ್ರಸ್‌ನಲ್ಲಿ ಕಳ್ಳತನ ನಡೆಸಿದ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಉಡುಪಿ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ ಕುಷ್ಕಿ ತಾಲೂಕಿನವರಾದ ರಮೇಶ್ ಜವಾನ್ ಸಿಂಗ್ (37), ಹಾಗೂ ಕಾಲಿಯಾ (25) ಬಂಧಿತ ಆರೋಪಿಗಳು. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಉಡುಪಿ ಠಾಣಾ ಇನ್ಸ್ಪೆಕ್ಟರ್ ಮಂಜುನಾಥ ಬಡಿಗೇರ ನೇತೃತ್ವದಲ್ಲಿ ಉಡುಪಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಉಡುಪಿ ನಗರ ಠಾಣಾ ಪಿಎಸ್‌ಐಗಳಾದ ಭರತೇಶ್ ಕಂಕಣವಾಡಿ, ಈರಣ್ಣ ಶಿರಗುಂಪಿ, ಗೋಪಾಲಕೃಷ್ಣ ಜೋಗಿ, ನಾರಾಯಣ ಹಾಗೂ ಸಿಬ್ಬಂಧಿಗಳಾದ ಹರೀಶ್, ಪ್ರಸನ್ನ ಸಿ, ಬಶೀರ್, ಜಯಕರ್, ಶಿವು ಕುಮಾರ್, ಹೇಮಂತ, ಆನಂದ, ಗಫೂರ್, ಸಂತೋಷ್ ರಾಥೋಡ್, ಮಲ್ಲಯ್ಯ, ಓಬಳೇಶ್, ಕಾರ್ತಿಕ್, ಕುಮಾರ್ ಕೊಪ್ಪದ್, ವಿನಯ್ ಕುಮಾರ್, ಸಂತೋಷ್ ರವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಉಡುಪಿಯ ಸರ್ಕಸ್ ಗ್ರೌಂಡ್, ರಾಷ್ಟ್ರೀಯ ಹೆದ್ದಾರಿ 66 ಬಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶೀಲಿಸಿ ಆರೋಪಿಗಳ ಮಾಹಿತಿ ಪಡೆದು, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿ0ದ 80,970 ರೂಪಾಯಿ ಮೌಲ್ಯದ ಒಟ್ಟು 681.830 ಮಿಲಿ ಗ್ರಾಂನ ಬೆಳ್ಳಿಯ ಸೊತ್ತುಗಳು ಹಾಗೂ 4,250 ಮೌಲ್ಯದ 470 ಮಿಲಿಗ್ರಾಂ ಚಿನ್ನ ಹಾಗೂ 1700 ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಮಧ್ಯಪ್ರದೇಶ ರಾಜ್ಯದವರಾಗಿದ್ದು, ಉಡುಪಿ ನಗರ ಠಾಣೆಯಲ್ಲಿ 2024ರಲ್ಲಿ ದಾಖಲಾದ 3 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ತಮ್ಮ ಸಹಚರರೊಂದಿಗೆ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಳವು ಮಾಡಿರುವುದರ ಬಗ್ಗೆ ಒಪ್ಪಿಕೊಂಡಿದ್ದಾರೆ. ಆರೋಪಿ ರಮೇಶ್ ಜವಾನ್ ಸಿಂಗ್ ವಿರುದ್ಧ ಈಗಾಗಲೇ ಬೇರೆ ರಾಜ್ಯದಲ್ಲಿ 11 ಕಳ್ಳತನ ಪ್ರಕರಣಗಳು ಮತ್ತು 2 ನೇ ಆರೋಪಿ ಕಾಲಿಯಾನ ಮೇಲೆ ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣಗಳು ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರಿದೆ.