
SSLC ಪಾಸ್ ಆಗಲು ಇನ್ನು ಕನಿಷ್ಟ 33 ಮಾರ್ಕ್ಸ್ ಸಾಕು;ಶಿಕ್ಷಣ ಇಲಾಖೆಯ ಮಹತ್ವದ ನಿರ್ಧಾರ
18/07/2025 07:05 AM
ಸಿಬಿಎಸ್‌ಇ ಶಾಲೆಗಳ ಮಾದರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತೀರ್ಣ ಅಂಕಗಳನ್ನು 35 ರಿಂದ 33 ಕ್ಕೆ ಇಳಿಸಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ದಿ ಹಿಂದೂ ಪತ್ರಿಕೆಯ ಜೊತೆ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದು, ಇದು ವಿದ್ಯಾರ್ಥಿ ಸ್ನೇಹಿ ಕ್ರಮವಾಗಿದ್ದು, ಮಕ್ಕಳ ಮೇಲಿನ ಹೊರೆ ಕಡಿಮೆ ಮಾಡುತ್ತದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಉತ್ತೀರ್ಣ ಅಂಕಗಳನ್ನು 33 ಕ್ಕೆ ಇಳಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಅಂತಿಮ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದರು.
ಅದೇ ಸಮಯದಲ್ಲಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆಯ ಅಂಕಗಳನ್ನು 125 ರಿಂದ 100 ಕ್ಕೆ ಇಳಿಸಬೇಕೆಂಬ ಬೇಡಿಕೆಗಳು ಬಂದಿವೆ. ಆದಾಗ್ಯೂ, ಇದು ಬಹಳ ಸೂಕ್ಷ್ಮ ವಿಷಯವಾಗಿದೆ. ನಾವು ನಮ್ಮ ಮಾತೃಭಾಷೆಯನ್ನು ನೋಡಿಕೊಳ್ಳಬೇಕು. ಪ್ರಥಮ ಭಾಷೆಗೆ 125 ಅಂಕಗಳನ್ನು ನಿಗದಿಪಡಿಸುವುದರ ಹಿಂದೆ ದೊಡ್ಡ ಇತಿಹಾಸವಿದೆ. ಆದ್ದರಿಂದ, ತಜ್ಞರು ಮತ್ತು ಸರ್ಕಾರದೊಂದಿಗೆ ಈ ಬಗ್ಗೆ ಚರ್ಚಿಸಿದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳಿಗೆ ಎಂಜಿನಿಯರಿAಗ್, ವೈದ್ಯಕೀಯ ಮತ್ತು ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಸಿಇಟಿ, ನೀಟ್ ಮತ್ತು ಜೆಇಇ ಉಚಿತ ಆನ್‌ಲೈನ್ ತರಬೇತಿಯನ್ನು ವಿಸ್ತರಿಸಲಾಗುವುದು ಎಂದರು. ಕಳೆದ ವರ್ಷ, ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿ ಪ್ರವೇಶ ಪರೀಕ್ಷೆಗಳಿಗೆ ಆನ್‌ಲೈನ್ ತರಬೇತಿಯನ್ನು ಕೇವಲ 25,000 ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗಿತ್ತು. ವಿದ್ಯಾರ್ಥಿಗಳಲ್ಲಿ ಆನ್‌ಲೈನ್ ತರಬೇತಿಗೆ ಭಾರಿ ಬೇಡಿಕೆ ಇರುವುದರಿಂದ, ಈ ವರ್ಷ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ವಿದ್ಯಾರ್ಥಿಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.