
Udupi: ಮಳೆ ಬಿರುಸು: ಸಾಂಪ್ರದಾಯಿಕ ಭತ್ತ ನಾಟಿ ಕಾರ್ಯ ಚುರುಕು
18/07/2025 10:44 AM
ಕರಾವಳಿಯಲ್ಲಿ ಮಳೆ ಚುರುಕುಗೊಂಡಿದೆ. ಮಳೆ ಹೆಚ್ಚಾದಷ್ಟು ರೈತನ ಮುಖದಲ್ಲಿ ಮಂದಹಾಸ ಮೂಡುತ್ತದೆ. ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಕೆಲವು ಕಡೆಗಳಲ್ಲಿ ಭತ್ತ ನಾಟಿ ಕಾರ್ಯ ಭರದಿಂದ ಸಾಗುತ್ತಿದೆ.
ಆಧುನಿಕತೆಯ ಅಬ್ಬರದಲ್ಲಿ ಜನರು ಕೃಷಿಯಿಂದ ವಿಮುಖರಾಗ್ತಾ ಇದ್ದಾರೆ. ಹಾಗಾಗಿ ಗದ್ದೆಗಳೇ ಮಾಯವಾಗುತ್ತಿದೆ. ಕಾರ್ಮಿಕರ ಕೊರತೆಯಿಂದಲೂ ಕೂಡಾ ಭತ್ತದ ಕೃಷಿಯಿಂದ ಜನ ಹಿಂದೆ ಸರಿಯುತ್ತಿದ್ದಾರೆ. ಅಳಿದು ಉಳಿದ ಗದ್ದೆಯಲ್ಲಿ ಒಂದೊ0ದು ಕಡೆಗಳಲ್ಲಿ ಕೃಷಿ ಕಾರ್ಯ ನಡೆಯುತ್ತಿದೆ. ಸಾಂಪ್ರದಾಯಿಕ ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ಕೆಲವೊಂದು ಕಡೆ ಭತ್ತದ ಕೃಷಿ ಜೀವಂತಿಕೆಯನ್ನು ಪಡೆದುಕೊಂಡಿದೆ.ಉಡುಪಿ ಜಿಲ್ಲೆಯ ಕೊಜಕ್ಕುಳಿ ಎಕರೆ ಗದ್ದೆಯಲ್ಲಿ ಕೃಷಿ ಕಾರ್ಯದಲ್ಲಿ ಇಡೀ ಕುಟುಂಬ ಪಾಲ್ಗೊಂಡಿತ್ತು.. ಹೌದು ಅಣ್ಣಯ್ಯ ಪಾಲನ್ ಮಾಲಕತ್ವದ ಕೊಜಕ್ಕುಳಿ ಗದ್ದೆಯಲ್ಲಿ ಇಡೀ ಕುಟುಂಬ ಸಾಂಪ್ರದಾಯಿಕ ನಾಟಿ ಕಾರ್ಯದಲ್ಲಿ ಪಾಲ್ಗೊಂಡರು.
ಅಣ್ಣಯ್ಯ ಪಾಲನ್ ಅವರ ಮಕ್ಕಳು, ಸೊಸೆಯಂದಿರು,ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹೀಗೆ ಎಲ್ಲರೂ ಒಂದು ದಿನ ಗದ್ದೆಗಿಳಿದು ಕೃಷಿ ಕಾರ್ಯದಲ್ಲಿ ತೊಡಗಿಕೊಂಡ್ರು. ತಮ್ಮತಮ್ಮ ಕಚೇರಿ ಕೆಲಸಕ್ಕೆ ರಜೆ ಹಾಕಿ ನಾಟಿ ಕಾರ್ಯ ಮಾಡಿದ್ರು. ಭತ್ತದ ಕೃಷಿ ಮಾಡಲು ಕಾರ್ಮಿಕರ ಕೊರತೆಯನ್ನು ಮನಗಂಡು ಸ್ವತಃ ಕುಟುಂಬಿಕರೇ ಗದ್ದೆಗಿಳಿದು ಕೃಷಿ ಕಾರ್ಯ ನೆರವೇರಿಸಿದ್ರು. ಆಧುನಿಕತೆಯ ಅಬ್ಬರಕ್ಕೆ ಮಾರು ಹೋಗಿ ಗದ್ದೆಗಳಲ್ಲಿ ಬಹು ದೊಡ್ಡ ದೊಡ್ಡ ಕಟ್ಟಡಗಳು ತಲೆ ಎತ್ತುತ್ತಿವೆ. ಕೆಲವು ಕಡೆಗಳಲ್ಲಿ ಗದ್ದೆಗಳನ್ನು ಹಡೀಲು ಬಿಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೆಲವೊಂದು ಕಡೆಗಳಲ್ಲಿ ಹಡೀಲು ಗದ್ದೆಗಳಿಗೆ ಪುನಃಶ್ಚೇತನ ತುಂಬುವ ಕೆಲಸ ನಡೆಯುತ್ತಿರುವುದು ಕಂಡು ಬರುತ್ತಿದೆ.