Udupi: ನಾಳೆ ಆಟಿ ಅಮಾವಾಸ್ಯೆ; "ಹಾಲೆ ಕಷಾಯ"ದಲ್ಲಿ ಬೆಸೆದುಕೊಂಡ ತೌಳವ ಆಚರಣೆ

Udupi: ನಾಳೆ ಆಟಿ ಅಮಾವಾಸ್ಯೆ; "ಹಾಲೆ ಕಷಾಯ"ದಲ್ಲಿ ಬೆಸೆದುಕೊಂಡ ತೌಳವ ಆಚರಣೆ


ತುಳುನಾಡಿನಲ್ಲಿ ಆಷಾಡ ಮಾಸದ ಆಚರಣೆಯೇ ವಿಭಿನ್ನ. ಅದರಲ್ಲೂ ಆಷಾಢ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆ ವಿಶೇಷವಾಗಿದೆ. ಜುಲೈ 24ರಂದು ಆಟಿ ಅಮಾವಾಸ್ಯೆ. ತುಳುನಾಡಿನುದ್ದಕ್ಕೂ ಆಟಿ ಅಮವಾಸ್ಯೆಯಂದು ಹಾಲೆ ಮರದ ತೊಗಟೆಯ ಕಷಾಯ ಇಂದಿಗೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. 


ಆಟಿ ತಿಂಗಳಲ್ಲಿ ಶುಭ ಕಾರ್ಯಗಳು ನಿಷಿದ್ಧ. ಆದ್ದರಿಂದ ಇದೊಂದು ಕಪ್ಪು ತಿಂಗಳು. ಭೂಮಿಯನ್ನು ಒಂದೇ ಸವನೆ ಸುಡುತ್ತಿದ್ದ ಸೂರ್ಯ ಮೋಡಗಳಿಂದಾಗಿ ತನ್ನ ಪ್ರತಾಪವನ್ನು ತೋರಿಸಲಾಗದೆ ನಿಧಾನವಾಗಿ ದಕ್ಷಿಣದತ್ತ ವಾಲಲು ತೊಡಗುತ್ತಾನೆ. ಆಗ ಮೋಡಗಳು ಸಂಚಯನಗೊಂಡು ಹನಿಗಳಾಗಿ ನೀರ ಧಾರೆ ಸುರಿಸಲು ತೊಡಗುತ್ತದೆ. ಮಳೆಯ ಭೋರ್ಗರೆತ ಇಳೆಯನ್ನು ತಂಪಾಗಿರಿಸುತ್ತದೆ. ಭೂಮಿ ಥಂಡಿಯಾಗುತ್ತದೆ. ಚುಮು ಚುಮು ಚಳಿ. ದಕ್ಷಿಣಕ್ಕೆ ಪ್ರಯಾಣ ಬೆಳೆಸಿದ್ದಾನೆ ಎಂದರೆ ಅದು ಆಟಿ ತಿಂಗಳ ಪ್ರಾರಂಭ ಎಂದರ್ಥ. ದಕ್ಷಿಣಾಯನದ ಆರಂಭವೇ ಆಟಿ ತಿಂಗಳು. ಭೂಮಿ ಥಂಡಿಯಾಗುತ್ತಿದ್ದಂತೆ, ಒಂದೊಮ್ಮೆ ಬಿರು ಬಿಸಿಲು ಭೂಮಿಯನ್ನು ಸುಡುತ್ತದೆ. ಹೀಗೆ ವಾತಾವರಣದಲ್ಲಿ ಏರುಪೇರಾಗುತ್ತದೆ. ವಾತಾವರಣದಲ್ಲಿ ಒಮ್ಮಿಂದೊಮ್ಮೆಲೆ ಉಂಟಾಗುವ ಬದಲಾವಣೆಗಳು ಮನುಷ್ಯನ ದೇಹಕ್ಕೆ ನೇರ ಪರಿಣಾಮ ಬೀರುತ್ತದೆ. ಆಗ ಶರೀರದ ರೋಗನಿರೋಧಕ ಶಕ್ತಿ ಬಲಯುತವಾಗುವ ಮೊದಲೇ ಶೀತ ಜ್ವರ, ಕೆಮ್ಮು, ಅಜೀರ್ಣ, ವಾಂತಿ, ಭೇದಿ ಮೊದಲಾದ ರೋಗಗಳು ದೇಹವನ್ನು ಪೀಡಿಸುವುದು ಸಾಮಾನ್ಯ. ಈ ರೀತಿ ವಾತಾವರಣದಲ್ಲಿ ಉಂಟಾಗುವ ವ್ಯತ್ಯಯ ಶರೀರವನ್ನು ಬಾಧಿಸುವ ಪ್ರಕ್ರಿಯೆ ನಮ್ಮಲ್ಲಿ ಕಂಡುಬರುವುದರಿಂದ ಜನರು ಅದರ ದುಷ್ಪರಿಣಾಮಗಳನ್ನು ತಡೆಯಲು ಆಟಿ ತಿಂಗಳ ಅಮವಾಸ್ಯೆಯಂದು ತುಳುನಾಡಿನಲ್ಲಿ ಜನ ಹಾಲೆ ಮರದ ಕಷಾಯವನ್ನು ಸೇವಿಸುತ್ತಾರೆ. 


ಆಟಿ ಅಮಾವಾಸ್ಯೆಯ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲೆ ಮರದ ತೊಗಟೆಯ ರಸವನ್ನು÷ ಸೇವಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಆಚರಣೆ. ಈ ಕಷಾಯದ ಔಷಧೀಯ ಉಪಯೋಗದಿಂದ ಇದು ಜಾನಪದ ಔಷಧಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲದೆ ಹಾಲೆಮರದ ರಸ ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂಬುದನ್ನು ವೈದ್ಯಲೋಕವೂ ಒಪ್ಪಿಕೊಂಡಿದೆ. ಈ ಆಯುರ್ವೇದ ಕಷಾಯ ಮಾಡುವ ವಿಧಾನವನ್ನನುಸರಿಸಿ ತಯಾರಿಸಿದ ಕಷಾಯ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ, ಗರ್ಭಿಣಿಯರಿಗೂ ಬಾಣಂತಿಯರಿಗೂ ಪರಿಣಾಮಕಾರಿಯಾಗಿದೆ. ಈ ಕಷಾಯದ ಸೇವನೆ ಪರಿಣಾಮ ದೇಹ ಅತಿ ಶೀಘ್ರವಾಗಿ ಶೀತ ವಾತಾವರಣವನ್ನು ತಡೆಯುವ ಶಕ್ತಿ ದೇಹದಲ್ಲಿ ಹೆಚ್ಚಾಗುತ್ತದೆ. ಜತೆಗೆ ಹುಳಬಾಧೆ ಯಿಂದ ಜೀರ್ಣಾಂಗವ್ಯೂಹವನ್ನು ಶುದ್ಧಗೊಳಿಸುತ್ತದೆ. ಅಲ್ಲದೆ ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಲೆ ಮರದ ತೊಗಟೆಯನ್ನು ನಸುಕಿನಲ್ಲಿ ಕಲ್ಲಿನಿಂದ ಜಜ್ಜಿ ತೆಗೆದು ಗುದ್ದಿ ರಸ ತೆಗೆಯಬೇಕು. ಕರಿಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಅರೆದು, ಬೊಳ್ಳು ಕಲ್ಲ (ಬಿಳಿ ಕಲ್ಲು)ನ್ನು ಕಾಯಿಸಿ ಒಗ್ಗರಣೆ ಕೊಟ್ಟು ಸೇವಿಸಬೇಕು. ಒಬ್ಬ ವ್ಯಕ್ತಿ 15 ಎಂ.ಎಲ್. ನಷ್ಟು ಕಷಾಯ ಸೇವಿಸುವುದು ಉತ್ತಮ. ಅದಾದ ಒಂದು ಗಂಟೆಯ ನಂತರ ಮೆಂತೆ ಗಂಜಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. 


ಹಾಲೆ ಮರದಲ್ಲಿ ಔಷಧೀಯ ಗುಣವಿದೆ ಎಂಬುದು ವೈಜ್ಞಾನಿಕ ರೀತಿಯಲ್ಲಿ ದೃಢಪಟ್ಟಿದೆ. ಆದರೆ ಆ ಮರದ ತೊಗಟೆಯನ್ನು ಬೆಳಕು ಹರಿಯುವ ಮುನ್ನವೇ ಕೊಂಡುತರಬೇಕು ಎನ್ನುತ್ತಿದೆ ಆಯುರ್ವೇದ ವಿಜ್ಞಾನ. ಬೆಳಕು ಹರಿಯುವ ಮುನ್ನ ಹಾಲೆ ಮರದ ತೊಗಟೆಯಲ್ಲಿ ಪೂರ್ಣಪ್ರಮಾಣದ ಔಷಧಿಯ ಗುಣವಿದೆ ಎನ್ನುವುದು ತಲೆತಲಾಂತರದಿಂದ ನಂಬಿಕೊಂಡು ಬಂದ ನಂಬಿಕೆ. ನಸುಕಿನ ವೇಳೆ ಈ ಮರದ ತೊಗಟೆಯನ್ನು ತರಬೇಕು. ಆದರೆ ಈ ಮರದ ಪರಿಚಯ ಇಲ್ಲದವರು ಕಾಸರಕನ ಮರದ ತೊಗಟೆಯನ್ನೂ ತರುವುದಿದೆ. ಇದು ಜೀವಕ್ಕೆ ಹಾನಿಕಾರಕ. ಆದ್ದರಿಂದ ಔಷಧಕ್ಕಾಗಿ ಸೇವಿಸುವ ಕಷಾಯ ಜೀವಕ್ಕೆ ಮಾರಕವಾಗದಿರಲಿ. ಕಳೆದ ಹಲವಾರು ವರ್ಷಗಳಿಂದ ಕಾಸರಕನ ಮರದ ತೊಗಟೆಯಿಂದ ಮಾಡಿದ ರಸವನ್ನು ಕುಡಿದು ಹಲವರು ಸಾವನ್ನಪ್ಪಿದ್ದಾರೆ.


ಕಾಸರಕನ ಮರ ಹಾಗೂ ಹಾಲೆ ಮರದ ವ್ಯತ್ಯಾಸ: 

* ಹಾಲೆ ಮರದ ಎಲೆಗಳು ದಪ್ಪವಾಗಿದ್ದು, ಒಂದು ಗೊಂಚಲಲ್ಲಿ ಏಳು ಪತ್ರಗಳಿರುತ್ತದೆ.

* ಹಾಲೆ ಮರದ ಎಲೆಗಳನ್ನು ಮುರಿದರೆ ಅದರಲ್ಲಿ ಹಾಲಿನ ರೂಪದ ದ್ರವ ಹೊರಬರುತ್ತದೆ. 

* ಕಾಸರಕನ ಮರದ ಎಲೆಗಳು ತೆಳ್ಳಗಿದ್ದು, ಎರಡರಿಂದ ಮೂರು ಇಂಚು ಅಗಲವಿರುತ್ತದೆ.

* ಕಾಸರಕನ ಮರದ ಎಲೆಗಳನ್ನು ಮುರಿದರೆ ಅದರಲ್ಲಿ ಹಾಲಿನ ರೂಪದ ದ್ರವ ಹೊರಬರುವುದಿಲ್ಲ.

* ಕಾಸರಕನ ಮರದಲ್ಲಿ ಕಂದು ಬಣ್ಣದ ಸಣ್ಣ ಹಣ್ಣುಗಳಿರುತ್ತದೆ

* ಹಾಲೆ ಮರವನ್ನು ಕಲ್ಲಿನಿಂದ ಜಜ್ಜಿದಾಗ ಅದರ ತೊಗಟೆ ಹಾಳೆ ರೂಪದಲ್ಲಿ ತೆಗೆಯಲು ಬರುತ್ತದೆ. 

* ಕಾಸರಕನ ಮರದ ತೊಗಟೆ ಕಲ್ಲಿನಿಂದ ಜಜ್ಜಿದಾಗ ಪುಡಿಪುಡಿಯಾಗುತ್ತದೆ. ಅದು ಹಾಳೆ ರೂಪದಲ್ಲಿ ಹೊರಬರುವುದಿಲ್ಲ.


                       ( ಚಿತ್ರ: ವಿಕಿಪೀಡಿಯ )

ಮಳೆಗಾಲದ ತಿಂಗಳಾದ ಆಟಿ (ಆಷಾಢ) ದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವ ಸಂಕೇತವಾಗಿ ಆಟಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. 



Ads on article

Advertise in articles 1

advertising articles 2

Advertise under the article