
Bangalore: ಎಫ್‌ಐಆರ್ ದಾಖಲಿಸಲು ಮೇಲಧಿಕಾರಿಗಳ ಅನುಮತಿ ಕಡ್ಡಾಯ; ಡಿಜಿ, ಐಜಿಪಿ ಸುತ್ತೋಲೆ
25/07/2025
ಭಾರತೀಯ ನ್ಯಾಯ ಸಂಹಿತೆಯ ನಾಲ್ಕು ಕಾಯ್ದೆಗಳಡಿ ಎಫ್‌ಐಆರ್ ದಾಖಲಿಸುವ ಮುನ್ನ ತನಿಖಾಧಿಕಾರಿಗಳು ಕಡ್ಡಾಯವಾಗಿ ಮೇಲಾಧಿಕಾರಿಗಳ ಅನುಮತಿ ಪಡೆಯುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ ಎಂ.ಎ. ಸಲೀಂ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಬಿಎನ್‌ಎಸ್‌ನ 304, 103 (2), 111 ಹಾಗೂ 113 (ಬಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುವ ಮುನ್ನ ಮೇಲಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿರಲಿದೆ. ಬಿಎನ್‌ಎಸ್ 304, 103 (2) ಹಾಗೂ 111 ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಎಎಸ್‌ಪಿ ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿ ಹಂತದ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆದಿರಬೇಕು. 113 (ಬಿ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಎಸ್‌ಪಿ ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಯವರನ್ನೊಳಗೊಂಡ0ತೆ ಮೇಲಾಧಿಕಾರಿಯಿಂದ ಲಿಖಿತ ಅನುಮತಿ ಪಡೆದಿರಬೇಕು.
ತುರ್ತು ಕಾರ್ಯಗಳ ನಿಮಿತ್ತ ಮೌಖಿಕವಾಗಿ ಆದೇಶ ಪಡೆದರೆ, 24 ಗಂಟೆಗಳೊಳಗೆ ಲಿಖಿತ ಅನುಮತಿ ಪಡೆದಿರಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡಿದ ನಂತರವಷ್ಟೇ ಆ ಕಾಯ್ದೆಗಳಡಿ ಎಫ್‌ಐಆರ್ ದಾಖಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಕೆಲ ಕಾಯ್ದೆಗಳು ಸಾಮಾನ್ಯವಾಗಿ ದುರ್ಬಳಕೆಯಾಗುವುದನ್ನು ನಿಗ್ರಹಿಸಲು ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈ ಕಾಯ್ದೆಗಳನ್ನು ಸೇರಿಸಲು ಮೇಲಾಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ ಮಾಡುವುದರಿಂದ ದುರ್ಬಳಕೆಯಾಗದಂತೆ ತಡೆಯಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದರು.