New Delhi: ಕರಡು ಮತದಾರರ ಪಟ್ಟಿ ಪ್ರಕಟಣೆ ತಡೆಗೆ ಸುಪ್ರೀಂ ನಕಾರ; ಆಧಾರ್, ವೋಟರ್ ಐಡಿ ಪರಿಗಣಿಸಲು ಸೂಚನೆ
ವಿಶೇಷ ತೀವ್ರ ಪರಿಷ್ಕರಣೆಯ (SIR) ವೇಳಾಪಟ್ಟಿಯಂತೆ ಆಗಸ್ಟ್ 1ರಂದು ಬಿಹಾರದಲ್ಲಿ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡುವುದಕ್ಕೆ ತಡೆ ನೀಡಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಜುಲೈ 10ರಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ಪಟ್ಟಿಗಳನ್ನು ನವೀಕರಿಸುವ ಉದ್ದೇಶಕ್ಕಾಗಿ ಆಧಾರ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಪರಿಗಣಿಸುವಂತೆ ಚುನಾವಣಾ ಆಯೋಗವನ್ನು ಕೇಳಿತ್ತು, ಆದರೆ ಅವುಗಳನ್ನು ಸ್ವೀಕರಿಸಬೇಕೆ ಅಥವಾ ತಿರಸ್ಕರಿಸಬೇಕೆ ಎಂಬುದನ್ನು ಚುನಾವಣಾ ಸಂಸ್ಥೆಯ ವಿವೇಚನೆಗೆ ಬಿಟ್ಟಿತ್ತು. ಆಧಾರ್ ಕಾರ್ಡ್ ಪೌರತ್ವದ ಪುರಾವೆ ಅಲ್ಲ ಎಂದು ವಾದಿಸಿತ್ತು. ಪಟ್ಟಿಯಿಂದ ಯಾರನ್ನಾದರೂ ತೆಗೆದುಹಾಕಿದರೆ, ಆ ಪ್ರಕ್ರಿಯೆಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಕೋರ್ಟ್ ಕೇಳಿದೆ. ಆಧಾರ್‌ನಂತಹ ದಾಖಲೆಗಳನ್ನು ಪರಿಗಣಿಸದಿರುವ ಮತ್ತು ಬಿಹಾರದ ಮತದಾರರ ಪಟ್ಟಿಯಿಂದ ದೊಡ್ಡ ಸಂಖ್ಯೆಯಲ್ಲಿ ಹೆಸರುಗಳನ್ನು ತೆಗೆದುಹಾಕಿರುವ ಬಗ್ಗೆ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವುದನ್ನು ಪ್ರಶ್ನಿಸಿ ಅರ್ಜಿದಾರರು ಕೋರ್ಟ್ ಮೊರೆ ಹೋಗಿದ್ದಾರೆ.
ಆಗಸ್ಟ್ 1 ರಂದು ಪ್ರಕಟವಾಗಲಿರುವ ಕರಡು ಪಟ್ಟಿಯನ್ನು ತಡೆಹಿಡಿಯುವಂತೆ ಅರ್ಜಿದಾರರು ಕೋರಿದ್ದಾರೆ. ಒಂದು ವೇಳೆ ಹೆಸರು ತೆಗೆದುಹಾಕಿದರೆ, ಪ್ರತಿಯೊಬ್ಬ ನಾಗರಿಕನು ಪ್ರತ್ಯೇಕವಾಗಿ ಪ್ರಶ್ನಿಸಬೇಕಾಗುತ್ತದೆ ಎಂದು ವಾದಿಸಿದ್ದಾರೆ. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಕರಡು ಪಟ್ಟಿಯ ಪ್ರಕಟಣೆಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿದರು. ವಾದಗಳನ್ನು ಮಂಡಿಸಲು ಒಂದು ಕಾಲಮಿತಿಯನ್ನು ನೀಡುವಂತೆ ನ್ಯಾಯಾಲಯವು ವಕೀಲರಿಗೆ ಸೂಚಿಸಿದೆ. ಜುಲೈ 29 ರಂದು ವಿಚಾರಣೆಯ ದಿನಾಂಕವನ್ನು ನಿರ್ಧರಿಸುವುದಾಗಿ ಹೇಳಿದೆ.