
ಬೋಯಿಂಗ್ ವಿಮಾನಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್ ಪರಿಶೀಲನೆ ಕಡ್ಡಾಯ;ಡಿಜಿಸಿಎ
16/07/2025 10:54 AM
ಇತ್ತೀಚೆಗೆ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಹಿನ್ನೆಲೆಯಲ್ಲಿ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಮಹತ್ವದ ಆದೇಶ ನೀಡಿದೆ. ಎಲ್ಲ ವಿಮಾನಯಾನ ಸಂಸ್ಥೆಗಳು ತಮ್ಮ ಬೋಯಿಂಗ್ 737 ಮತ್ತು 787 ಮಾದರಿ ವಿಮಾನಗಳಲ್ಲಿ ಇಂಧನ ನಿಯಂತ್ರಣ ಸ್ವಿಚ್ ಲಾಕಿಂಗ್ ವ್ಯವಸ್ಥೆಯನ್ನು ಜುಲೈ 21ರೊಳಗೆ ಪರಿಶೀಲಿಸಬೇಕು ಎಂದು ಸೂಚನೆ ನೀಡಿದೆ. ಈ ಕ್ರಮವು 2018ರಲ್ಲಿ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ನೀಡಿದ್ದ ಭದ್ರತಾ ಸೂಚನೆಯ ಆಧಾರದ ಮೇಲೆ ಜಾರಿಗೆ ಬಂದಿದೆ. ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆಯಲ್ಲಿ ದೋಷ ಕಂಡುಬ0ದರೆ, ವಿಮಾನ ಹಾರಾಟದ ವೇಳೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಆದೇಶದಿಂದ ಸ್ಪೈಸ್‌ಜೆಟ್, ಏರ್ ಇಂಡಿಯಾ, ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಸೇರಿದಂತೆ ಎಲ್ಲಾ ಪ್ರಮುಖ ವಿಮಾನಯಾನ ಸಂಸ್ಥೆಗಳ ಬೋಯಿಂಗ್ ವಿಮಾನಗಳಿಗೆ ತಪಾಸಣೆ ನಡೆಯಲಿದೆ. ಪ್ರಯಾಣಿಕರ ಭದ್ರತೆಗಾಗಿ ತಕ್ಷಣ ಕ್ರಮ ಕೈಗೊಳ್ಳಲು ಡಿಜಿಸಿಎ ಸೂಚನೆ ನೀಡಿದೆ. ಜುಲೈ 21ರೊಳಗೆ ಬೋಯಿಂಗ್ 737 ಮತ್ತು 787 ವಿಮಾನಗಳಲ್ಲಿ ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆ ತಪಾಸಣೆ ಮಾಡಬೇಕಿದ್ದು, ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದ ನಂತರ ಭದ್ರತಾ ಕ್ರಮಗಳಕ್ಕೆ ಒತ್ತು ನೀಡಲಾಗುತ್ತಿದೆ.
ವಿಮಾನಯಾನ ಸಂಸ್ಥೆಗಳು ಈ ಆದೇಶವನ್ನು ಗಂಭೀರವಾಗಿ ಪರಿಗಣಿಸಿ, ಪ್ರಯಾಣಿಕರ ಭದ್ರತೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಇಂಧನ ನಿಯಂತ್ರಣ ಸ್ವಿಚ್ ಲಾಕಿಂಗ್ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸುವ ಸಾಧ್ಯತೆಯ ಕುರಿತು 2018ರಲ್ಲಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಆದೇಶ ಹೊರಡಿಸಲಾಗಿದ್ದು, ಇದು ಸುಮಾರು 26 ವಿಭಿನ್ನ ಬೋಯಿಂಗ್ ಮಾದರಿಗಳ ಮೇಲೆ ಪರಿಣಾಮ ಬೀರುತ್ತದೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಸ್ಪೈಸ್‌ಜೆಟ್‌ನ ಸುಮಾರು 100 ವಿಮಾನಗಳನ್ನು ಪರಿಶೀಲಿಸಬೇಕಾಗುತ್ತದೆ. 2018ರ SAIB NM-18-33ರ ಪ್ರಕಾರ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿರ್ವಾಹಕರು ತಮ್ಮ ವಿಮಾನಗಳ ಫ್ಲೀಟ್‌ನಲ್ಲಿ ತಪಾಸಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಡಿಜಿಸಿಎ ಗಮನಕ್ಕೆ ಬಂದಿದೆ. ಈ ದೃಷ್ಟಿಯಿಂದ ಪರಿಣಾಮ ಬೀರಿದ ವಿಮಾನಗಳ ಎಲ್ಲ ವಿಮಾನಯಾನ ನಿರ್ವಾಹಕರು ಅಗತ್ಯವಿರುವ ತಪಾಸಣೆಯನ್ನು ಜುಲೈ 21ರೊಳಗೆ ಪೂರ್ಣಗೊಳಿಸಲು ಇಲ್ಲಿ ಸೂಚಿಸಲಾಗಿದೆ ಎಂದು ಡಿಜಿಸಿಎ ಆದೇಶದಲ್ಲಿ ತಿಳಿಸಿದೆ.