
Dharmasthala: ಎಸ್‌ಐಟಿಯಿಂದ ಯಾವ ಸದಸ್ಯರೂ ಹಿಂದೆ ಸರಿದಿಲ್ಲ; ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿಕೆ
23/07/2025
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಶಯಾತ್ಮಕ ರೀತಿಯಲ್ಲಿ ಪತ್ತೆಯಾದ ಶವಗಳ ಕುರಿತು ತನಿಖೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಯಾವುದೇ ಸದಸ್ಯರು ಕರ್ತವ್ಯದಿಂದ ಹಿಂದೆ ಸರಿಯುವುದಾಗಿ ತಿಳಿಸಿಲ್ಲ ಹಾಗೂ ತಂಡವು ಶೀಘ್ರದಲ್ಲೇ ಧರ್ಮಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ವಿಶೇಷ ತನಿಖಾ ತಂಡದ ಇಬ್ಬರು ಸದಸ್ಯರು ಕರ್ತವ್ಯದಿಂದ ಸ್ವಯಂ ಆಗಿ ಹಿಂದೆ ಸರಿಯಲಿದ್ದಾರೆ ಎಂದು ಮಾದ್ಯಮಗಳಲ್ಲಿ ವದಂತಿ ಹರಡುತ್ತಿರುವ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು. ತನಿಖೆಗೆ ಧರ್ಮಸ್ಥಳಕ್ಕೆ ತೆರಳುವಂತೆ ಎಸ್‌ಐಟಿಗೆ ಈಗಾಗಲೇ ಸೂಚಿಸಲಾಗಿದೆ. ಈ ಸಂಬAಧ ಧರ್ಮಸ್ಥಳ ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಎಂದರು.
ಎಸ್‌ಐಟಿಯಿಂದ ಯಾವ ಅಧಿಕಾರಿಯೂ ಹಿಂದೆ ಸರಿದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಹಾಗೇನಾದರೂ ಅಧಿಕಾರಿಗಳು ನಮಗೆ ಮಾಹಿತಿ ನೀಡಿದರೆ ಈ ಬಗ್ಗೆ ನಾವು ಮುಂದೆ ಏನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದರು. ಎಸ್‌ಐಟಿ ರಚನೆ ಕುರಿತು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ "ಅವರೇಕೆ ಆಕ್ಷೇಪ ವ್ಯಕ್ತಪಡಿಸಬೇಕು? ಅವರ ವಿರೋಧ ನೋಡಿದರೆ ಅವರ ಮನಸ್ಸಿನಲ್ಲಿ ಬೇರೇನೋ ಇರಬಹುದು ಎಂಬ ಸಂಶಯ ಉಂಟಾಗುತ್ತದೆ", ಎಂದರು.