Gujarat: ಕಾಡು ಪ್ರಾಣಿಗಳ ದಾಳಿ; ಪ್ರಾಣ ರಕ್ಷಣೆಗಾಗಿ ಕೃಷಿಕನಿಂದ ಹೊಸ ಪ್ರಯೋಗ
28/07/2025
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದೆ. ಅಲ್ಲಿನ ಜನರಿಗೆ ರಾತ್ರಿ ಮಲಗಿದರೆ ಕಾಡು ಪ್ರಾಣಿಗಳ ಪಾಲಾಗುತ್ತೇವೆಯೋ ಎನ್ನುವ ಆತಂಕ. ಹುಲಿ, ಚಿರತೆ ಉಪಟಳದಿಂದ ತನ್ನ ಮಕ್ಕಳನ್ನು ರಕ್ಷಿಸಲು ಬಡ ಕೃಷಿ ಕೆಲಸಗಾರ ನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಸುತ್ತ ದಟ್ಟಾರಣ್ಯ.. ಅಲ್ಲೇ ಪಕ್ಕದಲ್ಲೊಂದು ಪುಟ್ಟ ಗುಡಿಸಲು.. ಗುಡಿಸಲಿನಲ್ಲಿ ತನ್ನ ಆರು ಮಂದಿ ಪುಟ್ಟ ಮಕ್ಕಳೊಂದಿಗೆ ಬಡ ಕೃಷಿಕನ ಬದುಕು.. ತಾನಾಯಿತು ತನ್ನ ಪಾಡಾಯಿತು ಅಂತ ದುಡಿದು ತಿನ್ನುವ ಅಂದ್ರೆ ಕಾಡು ಪ್ರಾಣಿಗಳ ಉಪಟಳ.. ಹುಲಿ, ಚಿರತೆ ಕಾಟದಿಂದ ಬೇಸತ್ತ ಈ ಕೃಷಿಕ ತನ್ನ ಮಕ್ಕಳನ್ನೇ ಗೂಡಿನಲ್ಲಿ ಇರಿಸಿದ್ದಾರೆ. ಇದು ಗುಜರಾತಿನ ಅಮ್ರೇಲಿ ಜಿಲ್ಲೆಯ ಗಿರ್ ನ್ಯಾಶನಲ್ ಪಾರ್ಕ್ ಸಮೀಪದಲ್ಲೇ ಇರುವ ಬಡ ಕೃಷಿಕನೋರ್ವನ ಕಥೆ. ಹೆಂಡತಿ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ ನಂತರ ಮಕ್ಕಳ ಜೊತೆ ಕಾಡ ತಪ್ಪಲಿನ ಪುಟ್ಟ ಗುಡಿಸಲಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಈ ಕೃಷಿಕ ಭರತ್ ಬಾಯ್. ಹೆಂಡತಿ ಹಾಗೂ ತಾಯಿ ನಿಧನ ಹೊಂದಿದ ನಂತರ ಮಕ್ಕಳ ರಕ್ಷಣೆ, ಊಟೋಪಚಾರ ಎಲ್ಲವೂ ಈ ಬಡ ಕೃಷಿಕನ ಹೆಗಲಿಗೇರಿದೆ. ಒಂದೆಡೆ ತಾನು ದುಡಿದು ಮಕ್ಕಳನ್ನು ಸಲಹಬೇಕು, ಮತ್ತೊಂದೆಡೆ ಪುಟ್ಟ ಪುಟ್ಟ ಮಕ್ಕಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬಡ ಕೃಷಿಕ ಹೊಸತೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.