
Gundlupete: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ರಸ್ತೆ ಕುಸಿತ; ಎರಡು ದಿನ ಪ್ರವೇಶ ನಿರ್ಬಂಧ
29/07/2025
ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ರಸ್ತೆ ಕುಸಿತಗೊಂಡಿದೆ. ಹೀಗಾಗಿ ಜುಲೈ 29 ಮತ್ತು 30 ರಂದು ಎರಡು ದಿನ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದಾಗಿ ಬೆಟ್ಟದ ರಸ್ತೆ ಮಧ್ಯೆ ದೊಡ್ಡ ಹಳ್ಳ ನಿರ್ಮಾಣವಾಗಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ದೊಡ್ಡ ತಿರುವು ಅಥವಾ ರಾಕ್ಷಸ ಬಂಡೆ ಎಂದು ಕರೆಯುವ ಸ್ಥಳದಲ್ಲಿ ಭೂಮಿ ಕುಸಿದಿದ್ದು, ಸ್ಥಳಕ್ಕೆ ಗುಂಡ್ಲುಪೇಟೆ ತಹಶೀಲ್ದಾರ್ ತನ್ಮಯ್, ಅರಣ್ಯ ಇಲಾಖೆ ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭೂ ಕುಸಿತ ಉಂಟಾದ ಸ್ಥಳದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ಎರಡು ದಿನ ಪ್ರವೇಶ ನಿರ್ಬಂಧ ಹೇರಲಾಗಿದೆ. ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಒಂದು ಕಡೆ ರಸ್ತೆ ಪಕ್ಕದ ಪ್ಯಾರಪಿಟ್ ವಾಲ್ ಕುಸಿದಿರುವ ಕಾರಣ ಲೋಕೋಪಯೋಗಿ ಇಲಾಖೆ ದುರಸ್ತಿ ಕಾರ್ಯವನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 29 ಮತ್ತು 30ರಂದು ಬೆಟ್ಟದ ದೇವಾಲಯ ಮುಚ್ಚಲ್ಪಡುತ್ತದೆ. ಅಲ್ಲದೇ ಈ ಎರಡೂ ದಿನ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶಿಸಿದ್ದಾರೆ.