
Mangalore: ಧರ್ಮಸ್ಥಳ ಅಸಹಜ ಸಾವು ಪ್ರಕರಣ;ವರದಿ ನೀಡಲು ಮಹಿಳಾ ಆಯೋಗ ಸೂಚನೆ
14/07/2025 10:51 AM
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಡೆಯುತ್ತಿದ್ದ ಮಹಿಳೆಯರು ಹಾಗೂ ವಿಧ್ಯಾರ್ಥಿನಿಯರ ಅಸಹಜ ಸಾವು, ಕೊಲೆ ಪ್ರಕರಣಗಳ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮಹಿಳಾ ಆಯೋಗವು ನೋಟೀಸ್ ನೀಡಿದೆ.
ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ಅಲ್ಲದೇ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಕುಟುಂಬಿಕರು ನೀಡಿದ್ದ ಹೇಳಿಕೆಯನ್ನು ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಧರ್ಮಸ್ಥಳ ವ್ಯಾಫ್ತಿಯಲ್ಲಿ 20 ವರ್ಷಗಳಿಂದಲೂ ಮಹಿಳೆಯರ ಅತ್ಯಾಚಾರ, ದೌರ್ಜನ್ಯ, ನಾಪತ್ತೆ ಪ್ರಕರಣಗಳ ಬಗ್ಗೆ ಕುಟುಂಬಿಕರು ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ 20 ವರ್ಷಗಳಿಂದ ಧರ್ಮಸ್ಥಳದಲ್ಲಿ ನಡೆದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಸಾವು, ನಾಪತ್ತೆ ಪ್ರಕರಣಗಳ ವಿವರಗಳನ್ನು ನೀಡುವಂತೆ ಮಹಿಳಾ ಆಯೋಗ ಪೊಲೀಸ್ ಇಲಾಖೆಗೆ ನೋಟೀಸ್ ನೀಡಿದೆ. 20 ವರ್ಷಗಳಿಂದ ನಡೆದ ಮಹಿಳೆಯರು ವಿದ್ಯಾರ್ಥಿನಿಯರ ಪ್ರಕರಣಗಳಲ್ಲಿ ಪತ್ತೆ ಮಾಡಲಾಗದ ಪ್ರಕರಣಗಳೆಷ್ಟು..? ಪತ್ತೆಯಾದ ಪ್ರಕರಣಗಳೆಷ್ಟು? ಹಾಗೆಯೇ ಕೈಗೊಂಡ ಕ್ರಮಗಳ ಬಗ್ಗೆ 7 ದಿನಗಳ ಒಳಗಾಗಿ ವಿವರ ನೀಡುವಂತೆ ಪೊಲೀಸ್ ಅಧೀಕ್ಷಕರಿಗೆ ಮಹಿಳಾ ಆಯೋಗವು ಸೂಚಿಸಿದೆ ಎಂದು ತಿಳಿದು ಬಂದಿದೆ.