
Mangalore: ಕರಾವಳಿಯಲ್ಲಿ ಆಟಿ ಅಮಾವಾಸ್ಯೆ; ಕಾರಿಂಜ, ನರಹರಿ ಬೆಟ್ಟದಲ್ಲಿ ತೀರ್ಥಸ್ನಾನ
24/07/2025
ಇಂದು (ಜುಲೈ24) ಆಟಿಯ ಅಮಾವಾಸ್ಯೆ ಅಥವಾ ಆಷಾಢ ಅಮಾವಾಸ್ಯೆಯನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಆಟಿ ಅಮಾವಾಸ್ಯೆ ದಿನ ತೀರ್ಥ ಸ್ನಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ. ಸಕಲ ರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ತುಳುನಾಡಿಗರದ್ದು. ಈ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ನರಹರಿ ಬೆಟ್ಟದ ತುದಿಯಲ್ಲಿರುವ ಸದಾಶಿವ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ತೀರ್ಥಸ್ನಾನ ಮಾಡಿದರು.
ಆಟಿ ಅಮಾವಾಸ್ಯೆ ದಿನ ಮಹತೋಭಾರ ಕಾರಿಂಜ ಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ನಡೆಯುವ ತೀರ್ಥಸ್ನಾನಕ್ಕೆ ವಿಶೇಷ ಮನ್ನಣೆಯಿದೆ. ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರ ನರಹರಿ ಬೆಟ್ಟದ ತುದಿಯಲ್ಲಿರುವ ಸದಾಶಿವ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಕ್ಷೇತ್ರದಲ್ಲಿರುವ ಶಂಖ, ಚಕ್ರ, ಗಧಾ, ಪದ್ಮ ಎನ್ನುವ ನಾಲ್ಕು ನೀರಿನ ಕುಂಡಗಳಲ್ಲಿ ಪುಣ್ಯಸ್ನಾನ ಮಾಡಿದರು. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆಯೇ ಕ್ಷೇತ್ರಕ್ಕೆ ಸಾವಿರರು ಜನ ಭಕ್ತರು ಆಗಮಿಸಿದರು. ಮುಂಜಾನೆಯೇ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗಧಾ, ಪದ್ಮ ಗಳೆಂಬ ನಾಲ್ಕು ಕೂಪಗಳಲ್ಲಿ ಮಿಂದು ವಿನಾಯಕ ಸದಾಶಿವ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪುನೀತರಾದರು.