
Mnagalore: ಕ್ಲಿನಿಕ್‌ಗಳಿಗೆ ಆರೋಗ್ಯಾಧಿಕಾರಿಗಳ ದಾಳಿ; 4 ಕ್ಲಿನಿಕ್‌ಗಳಿಗೆ ಬೀಗ ಮುದ್ರೆ
20/07/2025
ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಮಂಗಳೂರಿನ ಮೂರು ಹಾಗೂ ದೇರಳಕಟ್ಟೆಯ ಒಂದು ಖಾಸಗಿ ಕ್ಲಿನಿಕ್‌ಗಳ ಮೇಲೆ ದ.ಕ.ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡವು ದಾಳಿ ನಡೆಸಿದೆ. ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಸ್ಮೆಂಟ್ (ಕೆಪಿಎಂಇ) ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರವಾನಿಗೆ ನವೀಕರಿಸದ, ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದ ಹಿನ್ನೆಲೆಯಲ್ಲಿ ಮಂಗಳೂರಿನÀ ಹಂಪನಕಟ್ಟೆ, ಪಳ್ನೀರ್ ಪರಿಸರದ ಮೂರು ಕ್ಲಿನಿಕ್‌ಗಳು ಹಾಗೂ ದೇರಳಕಟ್ಟೆಯ ಒಂದು ಕ್ಲಿನಿಕ್ ಮೇಲೆ ದಾಳಿ ಮಾಡಲಾಯಿತು ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದ್ದಾರೆ. ದೇರಳಕಟ್ಟೆಯ ಪ್ರಯೋಗಾಲಯವು ಯಾವುದೇ ದಾಖಲೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿತ್ತು. ಈ ಹಿಂದೆಯೇ ನೊಟೀಸ್ ಜಾರಿಗೊಳಿಸಿ ಸೂಕ್ತ ಪರವಾನಿಗೆಗಳನ್ನು ಪಡೆಯಲು ಸೂಚಿಸಲಾಗಿತ್ತು. ಅಲ್ಲದೆ ಪರವಾನಿಗೆ ನವೀಕರಿಸುವವರೆಗೆ ಕ್ಲಿನಿಕ್ ಮುಚ್ಚುವಂತೆ ತಿಳಿಸಿದ್ದೆವು. ಅದನ್ನು ಉಲ್ಲಂಘಿಸಿ ಬಾಗಿಲು ತೆರೆದ ಕಾರಣ ದಾಳಿ ಮಾಡಿ ಬೀಗಮುದ್ರೆ ಜಡಿಯಲಾಯಿತು. ಈ ಸಂದರ್ಭ ಅರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ. ದೀಪಾ ಪ್ರಭು, ಡಾ. ಚಿರಾಗ್ ಮತ್ತಿತರರು ಹಾಜರಿದ್ದರು.