.jpeg)
Mumbai: ಆ.23ರಿಂದ ಖಾಸಗಿ ಕಾರುಗಳಿಗೂ ರೋ-ರೋ ಸೇವೆ; ಕೊಂಕಣ ರೈಲ್ವೇ ನಿರ್ಧಾರ
22/07/2025
1999ರಿಂದ ಭಾರತದಲ್ಲಿ ಟ್ರಕ್‌ಗಳ ರೋಲ್ ಆನ್- ರೋಲ್ ಆಫ್(ರೋ-ರೋ) ಸೇವೆ ನೀಡುತ್ತಿರುವ ಕೊಂಕಣ ರೈಲ್ವೆ ನಿಗಮ, ಇದೀಗ ಈ ಸೇವೆಯನ್ನು ಖಾಸಗಿ ಕಾರು ಮಾಲಕರಿಗೂ ವಿಸ್ತರಿಸಲು ಸನ್ನದ್ಧವಾಗಿದೆ. ಸದ್ಯಕ್ಕೆ ಮಹಾರಾಷ್ಟ್ರದ ಕೋಲಾಡ್ ಹಾಗೂ ಗೋವಾದ ವೆರ್ಣ ನಡುವೆ ಈ ಸೇವೆಯನ್ನು ಆಗಸ್ಟ್ 23ರಿಂದ ಪ್ರಾರಂಭಿಸಲು ನಿರ್ಧರಿಸಿದೆ.
ಪಶ್ಚಿಮ ಘಟ್ಟ ದುರ್ಗಮ ಪ್ರದೇಶದಲ್ಲಿ ಸರಕುಗಳಿಂದ ತುಂಬಿದ ಟ್ರಕ್‌ಗಳನ್ನು ಮುಂಬಯಿಯಿ0ದ ಮಂಗಳೂರುವರೆಗೆ ಸುಲಭದಲ್ಲಿ ತಲುಪಿಸುತಿದ್ದ ರೋ-ರೋ ವ್ಯವಸ್ಥೆ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಫಲವಾಗಿತ್ತು. ಇದರೊಂದಿಗೆ ತೈಲದ ಬಳಕೆ ಹಾಗೂ ವಾಯು-ಹೊಗೆ ಮಾಲಿನ್ಯದಿಂದಲೂ ವಾತಾವರಣವನ್ನು ರಕ್ಷಿಸಿತ್ತು. ರೋ-ರೋ ಟ್ರಕ್ ಸೇವೆಯ ಯಶಸ್ಸಿನಿಂದ ಉತ್ತೇಜಿತವಾದ ಕೊಂಕಣ ರೈಲ್ವೆ ಇದೀಗ ಕಾರು ಸೇವೆಯನ್ನು ಪ್ರಾರಂಭಿಸಲಿದೆ. ಆ.23ರಿಂದ ಕೋಲಾಡ್ ಹಾಗೂ ಆ.24ರಿಂದ ವೆರ್ಣದಿಂದ ಈ ಸೇವೆ ಆರಂಭ ಗೊಳ್ಳಲಿದ್ದು, ದಿನ ಬಿಟ್ಟು ದಿನ ಈ ಸೇವೆ ಸೆ.11ರವರೆಗೆ ಲಭ್ಯವಿರುತ್ತದೆ ಎಂದು ತಿಳಿಸಿದೆ. Pic (knocksense)
ಪ್ರತಿದಿನ ಸಂಜೆ 5 ಗಂಟೆಗೆ ಆಯಾ ನಿಲ್ದಾಣದಿಂದ ಹೊರಡುವ ರೈಲು ಮರುದಿನ ಮುಂಜಾನೆ 5 ಗಂಟೆಗೆ ತನ್ನ ಗುರಿ ತಲುಪಲಿದೆ. ಈ ಸೇವೆಯನ್ನು ಪಡೆಯಲು ಇಚ್ಛಿಸುವ ಗ್ರಾಹಕರು ಮೂರು ಗಂಟೆ ಮೊದಲೇ ನಿಲ್ದಾಣಗಳಲ್ಲಿ ಹಾಜರಿರಬೇಕು ಎಂದು ತಿಳಿಸಿದೆ.ವಿಶೇಷವಾಗಿ ವಿನ್ಯಾಸಗೊಳಿಸಿದ ರೇಕ್‌ಗಳಲ್ಲಿ 40 ಕಾರುಗಳಿಗೆ ಇರಲು ಅವಕಾಶಗಳಿವೆ. ಇದಕ್ಕಾಗಿ ಪ್ರತಿ ಕಾರಿಗೆ ಜಿಎಸ್‌ಟಿ ಸೇರಿ 7,875 ರೂ. ಚಾರ್ಜ್ ಮಾಡಲಾಗುತ್ತದೆ. ಇದರೊಂದಿಗೆ ಪ್ರತಿ ಕಾರಿಗೆ ಮೂವರು ರೈಲಿನಲ್ಲಿರುವ 3ಎಸಿ ಕೋಚ್‌ನಲ್ಲಿ ಅಥವಾ ಸೀಟಿಂಗ್ ಕೋಚ್‌ನಲ್ಲಿ ನಿರ್ದಿಷ್ಟ ಮೊತ್ತ ನೀಡಿ ಪ್ರಯಾಣಿಸ ಬಹುದು. ಪ್ರತಿ ಟ್ರಿಪ್‌ಗೆ ಕನಿಷ್ಠ 16 ಕಾರುಗಳು ಬುಕ್ ಆಗಿರಬೇಕು. ಇಲ್ಲದಿದ್ದರೆ ಆ ಟ್ರಿಪ್‌ನ್ನು ರದ್ದುಪಡಿಸಲಾಗುತ್ತದೆ ಹಾಗೂ ಮುಂಗಡ ಹಣವನ್ನು ಗ್ರಾಹಕರಿಗೆ ಹಿಂದಿರುಗಿಸಲಾಗುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.