
Ramanagara: ಗೌಡಗೆರೆ ಸನ್ನಿಧಿಯಲ್ಲಿ ಭೀಮನ ಅಮಾವಾಸ್ಯೆ ಸಂಭ್ರಮ; ಹರಿದು ಬಂದ ಭಕ್ತಸಾಗರ
24/07/2025
ರಾಮನಗರ ಜಿಲ್ಲೆಯ ಗೌಡಗೆರೆ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಭೀಮನ ಅಮಾವಾಸ್ಯೆಯ ಸಂಭ್ರಮ ಮನೆ ಮಾಡಿದೆ. ಕ್ಷೇತ್ರದಲ್ಲಿ ವಿಶೇಷ ಪೂಜೆ ಕೈಂಕರ್ಯದ ಜೊತೆಗೆ ಇಂದು ಮಧ್ಯಾಹ್ನ 12.30ಕ್ಕೆ ಹೊಸ ತೇರಿನಲ್ಲಿ ಈ ಬಾರಿ ದೇಗುಲದಲ್ಲೇ ರಥೋತ್ಸವಕ್ಕೆ ಚಾಲನೆ ಸಿಗಲಿದೆ. ಇದರ ಜೊತೆಗೆ, ಸನ್ನಿಧಿಯಲ್ಲಿ ನಿರ್ಮಿಸಿರುವ ಝರಿಯ ಲೋಕಾರ್ಪಣೆ ಕೂಡ ಆಗಲಿದೆ. ಕ್ಷೇತ್ರದಲ್ಲಿ ಹಳೆಕಾಲದ ಸಂಪ್ರದಾಯ ಹೋಲುವ ಹಾಗೆ ಮ್ಯೂಸಿಯಂ ನಿರ್ಮಾಣ ಮಾಡಲಾಗಿದ್ದು, ಇದರ ಜೊತೆ ಚಾಮುಂಡಿ ತಾಯಿಗೆ ಕೃತಕ ಬೆಟ್ಟ ನಿರ್ಮಾಣ ಮಾಡಿ ಬೆಟ್ಟದಿಂದ ಬೀಳುವ ಝರಿಗೆ ಭೀಮನ ಅಮಾವಾಸ್ಯೆಯಾದ ಇಂದು ಚಾಲನೆ ನೀಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಬೃಹತ್ ಚಾಮುಂಡೇಶ್ವರಿ ತಾಯಿಯ ವಿಗ್ರಹದ ಕೆಳ ಭಾಗದಲ್ಲಿ ನಾಲ್ಕು ಅಡಿ ಕೆಳಗೆ ಮ್ಯೂಸಿಯಂ ಮಾಡಲಾಗಿದ್ದು, ರಾಜ್ಯದ ವಿವಿಧ ಭಾಗದಿಂದ ಆಗಮಿಸಿ ಕಲಾವಿದರಿಂದ ಕಲಾಕೃತಿಗಳ ಪುತ್ಥಳಿಗಳು ನೋಡುಗರ ಗಮನ ಸೆಳೆಯುತ್ತಿದೆ. ಮ್ಯೂಸಿಯಂ ಒಳಭಾಗದಲ್ಲಿ ಬೃಹತ್ ಚಾಮುಂಡೇಶ್ವರಿ ತಾಯಿ ಪ್ರತಿಮೆ, ರೈತರ ಪುತ್ಥಳಿಗಳು, ಬೃಹತ್ ಉತ್ತಮ ಆಕೃತಿಗಳು, ನಮ್ಮ ಸಂಪ್ರದಾಯವನ್ನ ಮುಂದಿನ ಯುವ ಪೀಳಿಗೆ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಪೂರ್ವಿಕರ ನಂಬಿಕೆ, ಆಚಾರ ವಿಚಾರ ಸಂಪ್ರದಾಯವನ್ನ ಉಳಿಸುವ ನಿಟ್ಟಿನಲ್ಲಿ ಪುತ್ಥಳಿಗಳ ಮೂಲಕ ಜನತೆಗೆ ಪರಿಚಯಿಸುವ ಕಾರ್ಯ ನಡೆದಿದೆ. ಅದರಂತೆ ಪುತ್ಥಳಿಗಳು ಕೂಡ ಕಲಾವಿದರ ಕುಂಚದಲ್ಲಿ ಬಹಳ ಅದ್ಭುತವಾಗಿ ಮೂಡಿ ಬಂದಿದೆ. Photo Credit ( getty images )
ಮಧ್ಯರಾತ್ರಿ 2 ಗಂಟೆಯಿ0ದ ಪ್ರಾರಂಭವಾಗುವ ಅಭಿಷೇಕ ಮಾರನೇ ದಿನ ಅಂದರೆ ಮಧ್ಯಾಹ್ನ 2 ಗಂಟೆಯವರೆಗೂ ನಿರಂತರವಾಗಿ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಇಲ್ಲಿನ ಮತ್ತೊಂದು ವಿಶೇಷ ಎಂದರೆ ಇಲ್ಲಿಗೆ ಬರುವ ಭಕ್ತರು ತೆಂಗಿನ ಕಾಯಿ ಹಾಗೂ ಉಪ್ಪಿನ ಸೇವೆ ಮಾಡಿದರೆ ತಮ್ಮ ಎಲ್ಲ ಸಮಸ್ಯೆಗಳು ನಿವಾರಣೆ ಆಗುತ್ತವೆ ಎಂಬ ದೃಢ ನಂಬಿಕೆ ಇದೆ. ಹಾಗಾಗಿಯೇ ಸಾವಿರಾರು ಸಂಖ್ಯೆಯ ಭಕ್ತರು ತೆಂಗಿನ ಕಾಯಿ ಹಾಗೂ ಉಪ್ಪು ಸಹಿತ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅದರಲ್ಲೂ, ಸೋಮವಾರ, ಮಂಗಳವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ದಿನದಂದು ಸಾವಿರಾರು ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ತಾಯಿಗೆ ಪೂಜೆ ಮಾಡಿ, ಪ್ರಸಾದ ಸೇವಿಸಿ ತಾಯಿ ಕೃಪೆಗೆ ಪಾತ್ರರಾಗುತ್ತಾರೆ. ಗೌಡಗೆರೆಯಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುವ ಭಕ್ತರು, ಅಲ್ಲಿಯೇ ಇರುವ ಪವಾಡ ಬಸವಪ್ಪನ ಆಶೀರ್ವಾದವನ್ನು ಸಹ ಪಡೆಯುತ್ತಾರೆ. ಬಸವಪ್ಪನ ಆಶೀರ್ವಾದ ಪಡೆಯಲು ದೂರದ ಊರುಗಳಿಂದ ಬರುತ್ತಾರೆ. ಒಟ್ಟಿನಲ್ಲಿ ಭೀಮನ ಅಮಾವಾಸ್ಯೆಯ ದಿನ ಗೌಡಿಗೆರೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಭಕ್ತರ ದಂಡೇ ನೆರೆದಿದೆ.