
Udupi: ನವಚೇತನ ಶಿಬಿರ ಮುಕ್ತಾಯ; ತೂಕ ಇಳಿಸಿ ಫಿಟ್ ಆಂಡ್ ಫೈನ್ ಆದ ಪೊಲೀಸರು (Video)
31/07/2025
ಪೊಲೀಸರ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗಾಗಿ ಆಯ್ದ 71 ಪೊಲೀಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ 30 ದಿನಗಳ ನವಚೇತನ ಶಿಬಿರವು ಜುಲೈ 30 ರಂದು ಮುಕ್ತಾಯಗೊಂಡಿತು.
ಆತ್ರಾಡಿಯ್ಲಲಿರುವ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಪರೀಕದಲ್ಲಿ ಜುಲೈ 1 ರಿಂದ ಶಿಬಿರ ಪ್ರಾರಂಭಗೊಂಡಿತ್ತು. ಸುಮಾರು 30 ದಿನಗಳ ಶಿಬಿರದಲ್ಲಿ ಪ್ರತೀ ದಿನ ಬೆಳಗ್ಗೆ ಸೌಖ್ಯವನ ಪರೀಕದಲ್ಲಿ ಯೋಗ ತರಬೇತುದಾರರಿಂದ ಒಂದು ಗಂಟೆ ಯೋಗ ತರಬೇತಿ ನೀಡಲಾಗುತ್ತಿತ್ತು.
ನಂತರ ಪೊಲೀಸ್ ತರಬೇತಿ ಶಾಲೆಯ ಶಿಕ್ಷಕರಿಂದ ಭೌತಿಕ ವ್ಯಾಯಾಮ, ಫಿಟ್ನೆಸ್ ತರಬೇತಿ, ಎಕ್ಸ್ಟ್ರೀಂ ಡಾನ್ಸ್ ಅಕಾಡೆಮಿಯಿಂದ ಝುಂಬಾ ತರಗತಿಗಳನ್ನು ನೀಡಲಾಗಿತ್ತು. ಸುಮಾರು 30 ದಿನದ ಶಿಬಿರದಲ್ಲಿ ಆರೋಗ್ಯ ಬಗ್ಗೆ ಉಪನ್ಯಾಸ ಸೇರಿದಂತೆ ಅವಶ್ಯಕತೆ ಇದ್ದವರಿಗೆ ಫಿಸಿಯೋಥೆರಪಿ, ಸ್ಟೀಮ್ ಬಾತ್ ವ್ಯವಸ್ಥೆಯನ್ನು ಕೂಡಾ ಮಾಡಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ ಪ್ರತೀ ಶಿಬಿರಾರ್ಥಿಗಳಿಗೂ ಡಯಟ್ ಆಹಾರ ನೀಡಲಾಗಿತ್ತು.
30 ದಿನಗಳ ಶಿಬಿರ ಸಮಾರೋಪ ಸಮಾರಂಭವು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಚಲನ ಚಿತ್ರ ನಟ ಪ್ರಮೋದ್ ಶೆಟ್ಟಿ ಹಾಗೂ ಕ್ರೀಡಾ ಪಟು ಅಭಿನ್ ದೇವಾಡಿಗ ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಶಾಂತಿವನ ಟ್ರಸ್ಟ್ ನ ಸೀತಾರಾಮ್ ತೋಳ್‌ಪಡಿತಾಯ, ಮುಖ್ಯ ವೈದ್ಯಾಧಿಕಾರಿ ಡಾ. ಗೋಪಾಲ ಪೂಜಾರಿ ಭಾಗವಹಿಸಿದ್ದರು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದ ಎಲ್ಲರನ್ನು ಗೌರವಿಸಲಾಯಿತು.
ಈ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು 30 ದಿನಗಳಲ್ಲಿ ಒಬ್ಬೊಬ್ಬರು ಸುಮಾರು 7 ಕೆ.ಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ. ಒತ್ತಡದ ಜೀವನಶೈಲಿ, ಬಿಡುವಿಲ್ಲದ ಕೆಲಸಗಳಿಂದಾಗಿ ಪೊಲೀಸರಿಗೆ ತಮ್ಮ ತಮ್ಮ ಆರೋಗ್ಯದತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೊಲೀಸರ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಗಾಗಿ ಉಡುಪಿ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್ ಅವರು ಕೈಗೊಂಡಿರುವ ವಿನೂತನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
(Xtreme dance academy ಯಿಂದ ಝುಂಬಾ ತರಬೇತಿ)